ರಾಂಚಿ: ದೇಶದ ಬಡ ಜನತೆಗೆ ಆರೋಗ್ಯ ವಿಮೆ ಕಲ್ಪಿಸುವ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ರಾಂಚಿಯಲ್ಲಿ ಚಾಲನೆ ನೀಡಿದರು.
ಜಾರ್ಖಂಡ್ ನ ರಾಂಚಿಯಲ್ಲಿ 50 ಕೋಟಿಗೂ ಹೆಚ್ಚು ಜನರನ್ನು ಗುರಿಯಾಗಿಸಿಕೊಂಡು ಅನುಷ್ಠಾನಗೊಳಿಸಿರುವ ಆಯುಷ್ಮಾನ್ ಭಾರತ್ ಯೋಜನೆಗೆ ಚಾಲನೆ ನೀಡಿ ಮಾತನಾಡಿ ಪ್ರಧಾನಿ, ಆರೋಗ್ಯಯುತ ಮತ್ತು ಸಶಕ್ತ ಭಾರತ ನಿರ್ಮಿಸಲು ನಾವು ಕಟಿಬದ್ಧರಾಗಿದ್ದೇವೆ ಎಂದು ಹೇಳಿದರು.
ಆರೋಗ್ಯ ಸೌಲಭ್ಯಗಳು ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಲ್ಲ. ಬಡ ಜನತೆಗೂ ಆರೋಗ್ಯ ಸೌಲಭ್ಯಗಳು ದೊರೆಯುವುದು ನಮ್ಮ ಉದ್ದೇಶ. ಇಂದು ಭಾರತದ ಪಾಲಿಗೆ ಐತಿಹಾಸಿಕ ದಿನ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಯನ್ನು ದೇಶಾದ್ಯಂತ ಇಂದು ಜಾರಿಗೊಳಿಸುತ್ತಿದ್ದೇವೆ. 10 ಕೋಟಿಗೂ ಅಧಿಕ ಬಡವರಿಗೆ ಆರೋಗ್ಯ ಸೌಲಭ್ಯಗಳು ಕೈಗೆಟುಕುವಂತೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ ಎಂದು ತಿಳಿಸಿದರು.
ವಿಶ್ವದಲ್ಲೇ ಅತಿದೊಡ್ಡ ಆರೋಗ್ಯ ಯೋಜನೆ ಇದಾಗಿದ್ದು, ಎಬಿ-ಎನ್ಹೆಚ್ ಪಿಎಂ ಯೋಜನೆ ಅಡಿ ದೇಶದ ಯಾವುದೇ ಭಾಗದಲ್ಲೂ ಚಿಕಿತ್ಸೆ ಪಡೆಯಬಹುದಾಗಿದೆ. ಇದು ಸಂಪೂರ್ಣ ಪೇಪರ್ ಲೆಸ್ ಮತ್ತು ಕ್ಯಾಶ್ ಲೆಸ್ ಆಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 2018-19ನೇ ಸಾಲಿಗೆ ಬಜೆಟ್ ನಲ್ಲಿ 2 ಸಾವಿರ ಕೋಟಿ ರುಪಾಯಿ ಅನುದಾನ ಒದಗಿಸಿದೆ ಎಂದು ಹೇಳಿದರು.
ಮೋದಿ ಭಾಷಣದ ಪ್ರಮುಖಾಂಶ…
* ಆಯುಷ್ಮಾನ್ ಭಾರತ್ ಯೋಜನೆ ದೇಶವನ್ನು ವೈದ್ಯಕೀಯ ಮಳಿಗೆ (ಹಬ್) ಆಗಿ ಮಾಡಲಿದೆ
* ವೈದ್ಯ ಸೌಲಭ್ಯಗಳು ಶ್ರೀಮಂತರ ಸ್ವತ್ತಲ್ಲ, ಬಡವರಿಗೂ ಸುಲಭವಾಗಿ ಸಿಗಲಿವೆ
* ಈ ಯೋಜನೆ ಜಗತ್ತಿನ ಎಲ್ಲ ತಜ್ಞರು ಹಾಗೂ ವಿದ್ವಾಂಸರಿಗೆ ಅಧ್ಯಯನ ವಸ್ತು
* ಆರೋಗ್ಯ ಜಾಗೃತಿಯ ಅಭಿಯಾನವೂ ಆಗಿ ಯೋಜನೆ ಜಾರಿ
* 445 ಜಿಲ್ಲೆಗಳಲ್ಲಿ ಭಾನುವಾರ ಏಕಕಾಲಕ್ಕೆ ಯೋಜನೆ ಜಾರಿ
* 14555-ಸಹಾಯವಾಣಿ ಸಂಖ್ಯೆ
* 85.9-ದೇಶದಲ್ಲಿ ಸಮರ್ಪಕ ಚಿಕಿತ್ಸೆ ಸಿಗದೆ ನರಳುತ್ತಿರುವ ಗ್ರಾಮೀಣ ಜನ
* 1.3 ಲಕ್ಷ ಆಯುಷ್ಮಾನ್ ಯೋಜನೆಗೆ ಸಹಯೋಗ ಕೊಟ್ಟಿರುವ ಆಸ್ಪತ್ರೆಗಳ ಸಂಖ್ಯೆ