ಬೆಂಗಳೂರು, ಸೆ.22- ಹೈಕೋರ್ಟ್ ಸೇರಿದಂತೆ ಎಲ್ಲಾ ನ್ಯಾಯಾಲಗಳಲ್ಲಿ ಕನ್ನಡ ಭಾಷೆಯಲ್ಲೇ ವ್ಯವಹರಿಸಬೇಕೆಂದು ಆಗ್ರಹಿಸಿ ನಗರದ ಮೈಸೂರ್ ಬ್ಯಾಂಕ್ ವೃತ್ತದ ಬಳಿ ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡಕ್ಕೆ ನ್ಯಾಯ ದೊರೆಯಬೇಕೆಂದರೆ ನ್ಯಾಯಾಲಯದಲ್ಲಿ ಕನ್ನಡ ಬಳಕೆಯಾಗಬೇಕು. ವಕೀಲರ ವಾದ ಕನ್ನಡದಲ್ಲಿರಬೇಕು ಮತ್ತು ನ್ಯಾಯಾಧೀಶರ ತೀರ್ಪುಗಳು ಕನ್ನಡದಲ್ಲೇ ಹೊರಬರಬೇಕು ಎಂದು ಹೇಳಿದರು.
ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ, ಬ್ಯಾಂಕು, ಕೇಂದ್ರ ಮತ್ತು ರಾಜ್ಯದ ಕಾರ್ಯಾಲಯಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿರಬೇಕೆಂದು ಅವರು ಒತ್ತಾಯಿಸಿದರು.
ರಾಜ್ಯದಲ್ಲಿ ನಮ್ಮ ಭಾಷೆಗೆ ಅಪಾಯ ಬಂದೊದಗಿದೆ. ಆಡಳಿತದಲ್ಲಿ ಕನ್ನಡ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಕಲೆ, ಸಾಂಸ್ಕøತಿಕ, ಸಾಹಿತ್ಯದ ಬೆಣವಣಿಗೆ ಪರಿಣಾಮಕಾರಿಯಾಗಿಲ್ಲ. ಕನ್ನಡದ ಏಕೀಕರಣದ ಉದ್ದೇಶ ಈಡೇರಲಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಪರಭಾಷಿಗರ, ಪರಭಾಷ ಚಿತ್ರಗಳ ಹಾವಳಿ ಮಿತಿಮೀರಿದೆ. ಯಾವುದೇ ಸರ್ಕಾರಗಳು ಕನ್ನಡ ಭಾಷೆಯ ಬಗ್ಗೆ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.
ವಲಸಿಗರ ಹೆಚ್ಚಳದಿಂದ ಬೆಂಗಳೂರಿನಲ್ಲಿ ಕನ್ನಡಕ್ಕೆ ಧಕ್ಕೆ ಉಂಟಾಗಿದೆ. ಇದನ್ನು ತಡೆಯದಿದ್ದರೆ ಕನ್ನಡ ನಶಿಸಿ ಹೋಗುತ್ತದೆ. ಕನ್ನಡದ ಉಳಿವಿಗಾಗಿ ನಿರಂತರ ಹೋರಾಟ ಮಾಡಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.