ಬಹುಕೋಟಿ ವೆಚ್ಚದ ಗೊಬ್ಬರ ಉತ್ಪಾದನ ಘಟಕಕ್ಕೆ ಪ್ರಧಾನಿ ಅಡಿಪಾಯ

ತಾಲ್ಚೇರ್​ (ಒಡಿಶಾ): 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗೊಬ್ಬರ ಉತ್ಪಾದನ ಘಟಕದ ನಿರ್ಮಾಣಕ್ಕೆ ಇಂದು ಒಡಿಶಾದಲ್ಲಿ ಅಡಿಪಾಯ ಹಾಕಿದರು.

ಬಳಿಕ ಮಾತನಾಡಿದ ಅವರು, ತಾಲ್ಚೇರ್​ ರಸಗೊಬ್ಬರ ಘಟಕದಲ್ಲಿ ಕಲ್ಲಿದ್ದಲನ್ನು ಅನಿಲವಾಗಿ ಪರಿವರ್ತಿಸಿ ಯೂರಿಯಾ ಗೊಬ್ಬರ ತಯಾರಿಸಲಾಗುವುದು. ಘಟಕವು ಮುಂದಿನ 36 ತಿಂಗಳಲ್ಲಿ ಉತ್ಪಾದನೆ ಆರಂಭಿಸಲಿದ್ದು, ವಿದೇಶಗಳ ಮೇಲಿನ ನೈಸರ್ಗಿಕ ಅನಿಲ ಮತ್ತು ಗೊಬ್ಬರ ಆಮದಿನ ಹೊರೆ ಕಡಿತಗೊಳ್ಳಲಿದೆ. ಗೊಬ್ಬರ ತಯಾರಿಕೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಲಿದ್ದು, ಈ ಮೂಲಕ ಭಾರತ ಹೊಸ ಎತರಕ್ಕೆ ಬೆಳೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಇಂತಹ ಘಟಕಗಳ ಸ್ಥಾಪನೆ ಭಾರತದ ಬೆಳವಣಿಗೆಗೆ ಪೂರಕವಾಗಿದ್ದು, ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮುಖಾಂತರ ಸಸ್ಯದಿಂದಲೂ ಬೃಹತ್​ ಪ್ರಮಾಣದಲ್ಲಿ ಗೊಬ್ಬರ ತಯಾರಿಕೆ ಮಾಡಬಹುದಾಗಿದೆ. ಈ ಯೋಜನೆಯಡಿ 1.27 ದಶಲಕ್ಷ ಟನ್​ ಬೇವು ಮಿಶ್ರಿತ ಯೂರಿಯಾ ಉತ್ಪಾದನೆ ಆಗಲಿದೆ. ಕೃಷಿಕರ ಬೆಳೆಗಳಿಗೆ ಅವಶ್ಯವಾದ ಪೋಷಕಾಂಶವನ್ನು ಕಲ್ಲಿದ್ದಲು ಮತ್ತು ಅನಿಲೀಕರಣ ತಂತ್ರಜ್ಞಾನವು ಗೊಬ್ಬರ ಒದಗಿಸಲಿದೆ ಎಂದರು.
ಕಪ್ಪು ವಜ್ರವಾದ ಕಲ್ಲಿದ್ದಲನ್ನು ಅನಿಲವಾಗಿ ಪರಿವರ್ತಿಸಿ ದೇಶದಲ್ಲಿ ಮೊದಲ ಬಾರಿಗೆ ಕಲ್ಲಿದ್ದಲು ಮತ್ತು ಅನಿಲೀಕರಣದ ಗೊಬ್ಬರ ತಯಾರಿಸಲಾಗುತ್ತಿದೆ. ಇದು ನೈಸರ್ಗಿಕ ಅನಿಲ ಗೊಬ್ಬರದ ಆಮದನ್ನು ಕಡಿಮೆಗೊಳಿಸಲಿದೆ. ಜೊತೆಗೆ ಸುಮಾರು 4,500 ಜನರಿಗೆ ಉದ್ಯೋಗ ಅವಕಾಶಗಳು ಲಭ್ಯವಾಗಲಿವೆ ಎಂದು ಹೇಳಿದರು.
ಗೇಲ್​(ಜಿಎಐಎಲ್​), ಕೋಲ್​ ಇಂಡಿಯಾ, ರಾಷ್ಟ್ರೀಯ ರಾಸಾಯನಿಕ ಮತ್ತು ಫರ್ಟಿಲೈಜರ್ಸ್​ ಹಾಗೂ ಎಫ್​ಸಿಎಲ್​ ಪಾಲುದಾರ ಕಂಪನಿಗಳು ಈ ಘಟಕಕ್ಕೆ ಕೈಜೋಡಿಸಿವೆ ಎಂದು ಮಾಹಿತಿ ನೀಡಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ