ಪ್ಯಾರಿಸ್: ರಾಫೆಲ್ ಯುದ್ಧ ವಿಮಾನ ಒಪ್ಪಂದದಲ್ಲಿ ತಮ್ಮ ಪಾತ್ರವಿಲ್ಲ ಎಂದು ಫ್ರಾನ್ಸ್ ಸರ್ಕಾರ ಸ್ಪಷ್ಟಪಡಿಸಿದೆ.
ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ಮಾಜಿ ಆಧ್ಯಕ್ಷ ಫ್ರಾಂಕೋಯಿಸ್ ಹೊಲ್ಯಾಂಡ್ ಅವರು ನೀಡಿದ್ದ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿರುವ ಹಿನ್ನಲೆಯಲ್ಲಿ ಈ ಬಗ್ಗೆ ಫ್ರಾನ್ಸ್ ಸರ್ಕಾರ ಸ್ಪಷ್ಟನೆ ನೀಡಿದ್ದು, ರಾಫೆಲ್ ಒಪ್ಪಂದದಲ್ಲಿ ಫ್ರಾನ್ಸ್ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಯೂರೋಪ್ ಮತ್ತು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ಒಪ್ಪಂದವನ್ನು ಭಾರತದಲ್ಲಿ ಯಾವ ಸಂಸ್ಥೆಗೆ ನೀಡಬೇಕು ಎಂಬುದು ಭಾರತಕ್ಕೆ ಬಿಟ್ಟ ವಿಚಾರ. ಅಂತೆಯೇ ತನ್ನ ಉತ್ಪಾದನೆಗಾಗಿ ಯಾವ ಸಂಸ್ಥೆಯನ್ನು ಆಯ್ಕೆ ಮಾಡಬೇಕು ಎಂಬ ಸ್ವಾತಂತ್ರ್ಯ ಭಾರತಕ್ಕಿದೆ. ಇದರಲ್ಲಿ ಫ್ರಾನ್ಸ್ ಸರ್ಕಾರದ ಪಾತ್ರವಿಲ್ಲ ಎಂದಿದ್ದಾರೆ.
ಇನ್ನು ತಮ್ಮ ಅವಶ್ಯಕತೆಗೆ ತಕ್ಕಂತೆ ಭಾರತ ಸರ್ಕಾರ ತನ್ನ ಸಹಭಾಗಿ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡಿದೆ. ಈ ಬಗ್ಗೆ ಡಸಾಲ್ಟ್ ಎವಿಯೇಷನ್ ಸಂಸ್ಥೆ ಈಗಾಗಲೇ ಸಾಕಷ್ಟು ಭಾರತೀಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು. ಕಾನೂನಿನ ಅನ್ವಯವೇ ಇವು ಕಾರ್ಯ ನಿರ್ವಹಿಸುತ್ತಿವೆ ಎಂದು ಫ್ರಾನ್ಸ್ ಸರ್ಕಾರ ಸ್ಪಷ್ಟ ಪಡಿಸಿದೆ.
ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಅವರು, ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಭಾರತ ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಢಿಫೆನ್ಸ್ ಅನ್ನು ಆಯ್ಕೆ ಮಾಡಿತು. ಆದರೆ ಡಸ್ಸಾಲ್ಟ್ ಏವಿಯೇಷನ್ ಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಹೇಳಿದ್ದ ಹಿನ್ನಲೆಯಲ್ಲಿ ತೀವ್ರ ವಿವಾದ ಆರಂಭವಾಗಿತ್ತು.