ಗೋಲ್ಡನ್​ ಗ್ಲೋಬ್​ ರೇಸ್ ನಲ್ಲಿ ನೌಕಾ ಅಪಘಾತ ಹಿನ್ನಲೆ​: ಕಮಾಂಡರ್​ ಅಭಿಲಾಶ್​ ರಕ್ಷಣೆಗೆ ಧಾವಿಸಿದ ಐಎನ್​ಎಸ್​ ಸತ್ಪುರಾ

ಕೊಚ್ಚಿ: ಗೋಲ್ಡನ್​ ಗ್ಲೋಬ್​ ರೇಸ್​ ವೇಳೆ ಹಿಂದು ಮಹಾಸಾಗರದಲ್ಲಿ ಚಂಡಮಾರುತಕ್ಕೆ ಸಿಲುಕಿ ನೌಕೆ ಅಪಘಾತಕ್ಕೀಡಾದ ಕಾರಣ ಗಾಯಗೊಂಡಿರುವ ಭಾರತೀಯ ನೌಕಾಪಡೆಯ ಅಧಿಕಾರಿಯನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಕಮಾಂಡರ್​ ಅಭಿಲಾಶ್​ ಟಾಮಿ ಅವರಿದ್ದ ‘ತುರಿಯಾ’ ನೌಕೆ ಆಸ್ಟ್ರೇಲಿಯಾದ ಪರ್ತ್​ನಿಂದ ಸುಮಾರು 1,900 ನಾಟಿಕಲ್​ ಮೈಲಿ ದೂರದಲ್ಲಿ ದಕ್ಷಿಣ ಹಿಂದು ಮಹಾಸಾಗರದಲ್ಲಿ ಅಪಘಾತಕ್ಕೀಡಾಗಿದೆ. ಅಭಿಲಾಶ್​ ಅವರ ಬೆನ್ನಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಅವರ ರಕ್ಷಣೆಗಾಗಿ ಭಾರತೀಯ ನೌಕಾ ಪಡೆಯ ಐಎನ್​ಎಸ್​ ಸತ್ಪುರಾ ನೌಕೆ ಸ್ಥಳಕ್ಕೆ ತೆರಳುತ್ತಿದೆ. ಆಸ್ಟ್ರೇಲಿಯಾ ರಕ್ಷಣಾ ಇಲಾಖೆ ಸಹ ಭಾರತೀಯ ನೌಕಾ ಪಡೆಯೊಂದಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದೆ.

ಜುಲೈ 1 ರಂದು ಫ್ರಾನ್ಸ್​ನಿಂದ ರೇಸ್​ ಪ್ರಾರಂಭವಾಗಿತ್ತು. 84 ದಿನಗಳ ಅವಧಿಯಲ್ಲಿ ಅಭಿಲಾಶ್​ ಅವರು ಸುಮಾರು 10,500 ನಾಟಿಕಲ್​ ಮೈಲು ದೂರವನ್ನು ಕ್ರಮಿಸುವ ಮೂಲಕ ರೇಸ್​ನಲ್ಲಿ ಮೂರನೇ ಸ್ಥಾನವನ್ನು ಕಾಪಾಡಿಕೊಂಡಿದ್ದರು. ಆದರೆ, ಹಿಂದು ಮಹಾಸಾಗರದಲ್ಲಿ ಎದ್ದ ಭೀಕರ ಚಂಡಮಾರುತದಿಂದಾಗಿ ಸುಮಾರು 130 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, 10 ಮೀಟರ್​ಗಿಂತ ಹೆಚ್ಚು ಎತ್ತರದ ಅಲೆಗಳು ಏಳುತ್ತಿವೆ. ಚಂಡಮಾರುತದ ಹೊಡೆತಕ್ಕೆ ಸಿಲುಕಿ ಅಭಿಲಾಶ್​ ಅವರಿದ್ದ ನೌಕೆ, ಎರಡನೇ ಸ್ಥಾನದಲ್ಲಿದ್ದ ಡೆನ್ಮಾರ್ಕ್​ನ ಮಾರ್ಕ್​ ಸ್ಲಾಟ್​ ಮತ್ತು ಐರ್ಲೆಂಡ್​ನ ಗ್ರೆಗರ್ ಮೆಕ್ಗುಕಿನ್ ಅವರ ನೌಕೆ ಅಪಘಾತಕ್ಕೀಡಾಗಿವೆ. ಮೆಕ್ಗುಕಿನ್​ ಮತ್ತು ಸ್ಲಾಟ್​ ಸುರಕ್ಷಿತವಾಗಿದ್ದು, ಅಭಿಲಾಶ್​ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಭಿಲಾಶ್​ ಅವರು 2013ರಲ್ಲಿ ಏಕಾಂಗಿಯಾಗಿ ವಿಶ್ವ ಪರ್ಯಟನೆ ಮಾಡಿ ಬಂದಿದ್ದರು. ಈಗ ಸುಮಾರು 30 ಸಾವಿರ ನಾಟಿಕಲ್​ ಮೈಲು ದೂರ ಕ್ರಮಿಸುವ ಗೋಲ್ಡನ್​ ಗ್ಲೋಬ್​ ರೇಸ್​ನಲ್ಲಿ ಪಾಲ್ಗೊಂಡಿರುವ ಏಕೈಕ ಭಾರತೀಯ ಸ್ಪರ್ಧಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ