
ಬೆಂಗಳೂರು,ಸೆ.21 ಹೈಟೆಕ್ ಸೌಲಭ್ಯವುಳ್ಳ ಪಾಲಿಕೆ ಸೌಧ, ಮಾದರಿ ಪಾದಚಾರಿ ಮಾರ್ಗ, ಅತ್ಯಾಧುನಿಕ ಕ್ರೀಡಾ ಸಂಕೀರ್ಣ, ವಿನೂತನ ಬಸ್ ನಿಲ್ದಾಣ ಹಾಗೂ ದೇಶದಲ್ಲೇ ಪ್ರಪ್ರಥಮ ಬಾರಿಗೆ ಉಚಿತ ವೈಫೈ ಸೌಲಭ್ಯ ಒಳಗೊಂಡ ವಾರ್ಡ್ ಎಂಬ ಕೀರ್ತಿಗೆ ಪಾತ್ರವಾಗಿದೆ ಗೋವಿಂದರಾಜನಗರ ವಾರ್ಡ್.
ಮಾಜಿ ಸಚಿವ ಹಾಗೂ ಶಾಸಕ ವಿ.ಸೋಮಣ್ಣ ಹಾಗೂ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ಅವರ ಪರಿಶ್ರಮದ ಫಲವಾಗಿ ಗೋವಿಂದರಾಜನಗರ 198 ವಾರ್ಡ್‍ಗಳಲ್ಲಿ ಮಾದರಿ ವಾರ್ಡ್ ಎಂಬ ಹಿರಿಮೆಗೆ ಪಾತ್ರವಾಗಿದೆ.
ನಗರದ ಪ್ರತಿಷ್ಟಿತ ಪ್ರದೇಶವಾದ ಎಂ.ಜಿ.ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದುವರೆಗೂ ಉಚಿತ ವೈಫೈ ಸೇವೆ ನೀಡಲು ಸಾಧ್ಯವಾಗಿಲ್ಲ.
ಆದರೆ ಗೋವಿಂದರಾಜನಗರ ವಾರ್ಡ್ ಇನ್ನು ಮುಂದೆ ಉಚಿತ ವೈಫೈ ವಾರ್ಡ್ ಆಗಲಿದ್ದು, ಈ ವಾರ್ಡ್‍ನಲ್ಲಿ ಸಂಚರಿಸುವ ಪ್ರತಿಯೊಬ್ಬ ನಾಗರಿಕರೂ ಪ್ರತಿನಿತ್ಯ ಒಂದು ಜಿಬಿ ಡಾಟಾ ಬಳಕೆ ಮಾಡಿಕೊಳ್ಳಬಹುದಾಗಿದೆ.
ಅದೇ ರೀತಿ ವಾರ್ಡ್‍ನಲ್ಲಿ ವಿನೂತನವಾದ ಬಸ್ ನಿಲ್ದಾಣ ಮತ್ತು ಮಾದರಿ ಪಾದಚಾರಿ ಮಾರ್ಗ ನಿರ್ಮಿಸಲಾಗಿದ್ದು, ಈ ಎರಡೂ ಸ್ಥಳಗಳಲ್ಲೂ ಉಚಿತ ವೈಫೈ ಅಳವಡಿಕೆ ಮಾಡಲಾಗಿದೆ.
ಟೆಂಡರ್ ಶೂರ್ ಯೋಜನೆಯಡಿ ಒಂದು ಕಿ.ಮೀ ಮಾದರಿ ಪಾದಚಾರಿ ಮಾರ್ಗ ನಿರ್ಮಿಸಲು 14 ಕೋಟಿ ರೂ. ವೆಚ್ಚವಾಗುತ್ತದೆ. ಆದರೆ ಗೋವಿಂದರಾಜನಗರದಲ್ಲಿ 1.25 ಕೋಟಿ ವೆಚ್ಚದಲ್ಲಿ ವಿಶಿಷ್ಟವಾದ ಪಾದಚಾರಿ ಮಾರ್ಗ ನಿರ್ಮಾಣಗೊಂಡಿದೆ.
ವಾರ್ಡ್‍ನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಪಾಲಿಕೆ ಸೌಧ ನಿರ್ಮಾಣ ಮಾಡಲಾಗಿದ್ದು, ನಾಲ್ಕು ಹಂತಸ್ತಿನ ಈ ಕಟ್ಟಡದಲ್ಲಿ ಬಿಬಿಎಂಪಿ, ಕಂದಾಯ, ಇಂಜಿನಿಯರಿಂಗ್, ಆರೋಗ್ಯ ಹಾಗೂ ಯೋಗ ಕೇಂದ್ರಗಳಿವೆ. ಮಾತ್ರವಲ್ಲ ಅಧಿಕಾರಿಗಳು ಸಭೆ ನಡೆಸಲು ಸುಸಜ್ಜಿತ ಕೊಠಡಿ ನಿರ್ಮಿಸಲಾಗಿದೆ.
ಕಟ್ಟಡದ ಮುಂಭಾಗ ನಾಡಪ್ರಭು ಕೆಂಪೇಗೌಡರ ಅಶ್ವರೂಢ ಪ್ರತಿಮೆ ಸ್ಥಾಪನೆ ಮಾಡಲಾಗಿದ್ದು, ಕಚೇರಿ ಆವರಣದಲ್ಲೇ ಜನರಿಕ್ ಔಷಧಿ ಮಳಿಗೆ ಇರುವುದರಿಂದ ಸುಂದರ ಮತ್ತು ಹೈಟೆಕ್ ಸೌಲಭ್ಯವುಳ್ಳ ನಂ.1 ವಾರ್ಡ್ ಕಚೇರಿ ಎಂಬ ಹೆಗ್ಗಳಿಕೆಗೆ ಪಾಲಿಕೆ ಸೌಧ ಭಾಜನವಾಗಲಿದೆ.
ಪಾಲಿಕೆ ಸೌಧದ ಕೂಗಳತೆಯ ದೂರದಲ್ಲಿ ಅಟಲ್ ಜೀ ಶಕ್ತಿ ಸೌಧ ಕ್ರೀಡಾ ಸಂಕೀರ್ಣ ನಿರ್ಮಿಸಲಾಗಿದ್ದು, ಈ ಕಟ್ಟಡದಲ್ಲಿ ಬ್ಯಾಡ್ಮಿಂಟನ್, ಕೆರಂ, ಚೆಸ್, ಜಿಮ್ ಹಾಗೂ ವಿವಿಧ ಕ್ರೀಡೆಗಳನ್ನಾಡಲು ಅತ್ಯಾಧುನಿಕ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ.
ವಾರ್ಡ್‍ನ ಎರಡು ಕಡೆ ವಿನೂತನ ಬಸ್ ನಿಲ್ದಾಣ ನಿರ್ಮಿಸಲಾಗಿದ್ದು, ನಿಲ್ದಾಣ ಸಮೀಪದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಒಟ್ಟಾರೆ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಮಾದರಿ ವಾರ್ಡ್ ಎಂಬ ಕೀರ್ತಿಗೆ ಪಾತ್ರವಾಗಿರುವ ಗೋವಿಂದರಾಜನಗರದಲ್ಲಿ ಭಾನುವಾರ ಈ ಎಲ್ಲ ಸೌಲಭ್ಯಗಳನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಶಾಸಕ ಸೋಮಣ್ಣ ಅವರು ಲೋಕಾರ್ಪಣೆ ಮಾಡಲಿದ್ದಾರೆ.
ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ನಿರ್ಮಲಾ ಸೀತಾರಾಮನ್, ಡಿಸಿಎಂ ಡಾ.ಜಿ.ಪರಮೇಶ್ವರ್, ಮೇಯರ್ ಜಿ.ಸಂಪತ್‍ರಾಜ್,ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ ಸೇರಿದಂತೆ ಹಲವಾರು ಪ್ರಮುಖರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಕೇಂದ್ರ ಸಚಿವ ಅನಂತಕುಮಾರ್ ಹಾಗೂ ಶಾಸಕ ವಿ.ಸೋಮಣ್ಣ ಅವರ ಮಾರ್ಗದರ್ಶನದಲ್ಲಿ ಇಡೀ ವಾರ್ಡ್‍ನ್ನು ಮಾದರಿ ವಾರ್ಡ್‍ನ್ನಾಗಿ ಪರಿವರ್ತಿಸಲಾಗಿದೆ ಎಂದು ಗೋವಿಂದರಾಜನಗರ ವಾರ್ಡ್ ಪಾಲಿಕೆ ಸದಸ್ಯ ಕೆ.ಉಮೇಶ್ ಶೆಟ್ಟಿ ತಿಳಿಸಿದ್ದಾರೆ.