
ಬೆಂಗಳೂರು, ಸೆ.21 ಸಮ್ಮಿಶ್ರ ಸರ್ಕಾರದ ಉಳಿವು ನಮಗೆ ಅತ್ಯಂತ ಮಹತ್ವದ್ದಾಗಿದ್ದು, ನಮ್ಮ ವೈಯಕ್ತಿಕ ಕಾರಣಗಳು ಸರ್ಕಾರಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ನಿನ್ನೆ ತಡರಾತ್ರಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಜೊತೆ ಸಭೆ ನಡೆಸಿದ ಅವರು, ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡದಂತೆ ಮನವರಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಪಿಎಲ್ಡಿ ಬ್ಯಾಂಕ್ ಚುನಾವಣೆಯಿಂದ ಹೊತ್ತಿಕೊಂಡು ಕಿಡಿ ಇಂದು ಸಮ್ಮಿಶ್ರ ಸರ್ಕಾರಕ್ಕೆ ಬೆಂಬಿಡದ ಭೂತವಾಗಿ ಕಾಡುತ್ತಿದೆ. ಡಿ.ಕೆ.ಶಿವಕುಮಾರ್ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬೆಂಬಲವಾಗಿ ನಿಂತಿದ್ದರಿಂದ ಪಿಎಲ್ಡಿ ಬ್ಯಾಂಕ್ ಚುನಾವಣೆ ಸಂಘರ್ಷಕ್ಕೆ ಕಾರಣವಾಯಿತು ಎಂಬ ಅಭಿಪ್ರಾಯಗಳಿವೆ. ಇದನ್ನು ನೆಪವಾಗಿಟ್ಟುಕೊಂಡು ಜಾರಕಿ ಹೊಳಿ ಸಹೋದರರು ಸರ್ಕಾರವನ್ನು ಅಸ್ಥಿರಗೊಳಿಸುವ ಮಟ್ಟಕ್ಕೂ ರಾಜಕಾರಣ ಮಾಡಿದ್ದಾರೆ. ಅದಕ್ಕೆ ಪೂರಕವಾಗಿ ಹಲವಾರು ಬೆಳವಣಿಗೆಗಳು ನಡೆದಿವೆ. ಇದು ಸೂಕ್ಷ್ಮ ಸನ್ನಿವೇಶ ಹಾಗಾಗಿ ಯಾರು, ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಎಚ್ಚರಿಕೆಯ ಹೆಜ್ಜೆ ಇಡೋಣ. ನಿಮಗೆ ರಾಮನಗರ ಮತ್ತು ಬಳ್ಳಾರಿ ಜಿಲ್ಲೆಗಳ ಉಸ್ತುವಾರಿ ಇದೆ. ಈ ಎರಡೂ ಜಿಲ್ಲೆಗಳ ಅಭಿವೃದ್ಧಿ ಬಗ್ಗೆ ಹೆಚ್ಚು ಗಮನ ಕೊಡಿ. ಖಾತೆಯನ್ನು ಇನ್ನಷ್ಟು ಸಮರ್ಥವಾಗಿ ನಿಭಾಯಿಸಿ. ಸದ್ಯಕ್ಕೆ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಸಿದ್ದರಾಮಯ್ಯ ತಿಳಿ ಹೇಳಿದ್ದಾರೆ ಎನ್ನಲಾಗಿದೆ.
ಈಗಷ್ಟೇ ನಾನು ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದಿದ್ದೇನೆ. ನನಗೂ ಸದ್ಯದ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ. ನಾನು ನನ್ನ ಪಾಡಿಗೆ ಇದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎನ್ನಲಾಗಿದೆ.