
ಬೆಂಗಳೂರು, ಸೆ.21 ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕುಮ್ಮಕ್ಕಿನಿಂದಲೇ ಯಡಿಯೂರಪ್ಪನವರ ಮನೆಗೆ ನುಗ್ಗುವ ಪ್ರಯತ್ನ ಮಾಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಇಂದಿಲ್ಲಿ ವಾಗ್ದಾಳಿ ನಡೆಸಿದರು.
ಅಧಿಕಾರ ಕಳೆದುಕೊಳ್ಳುವ ಹತಾಶೆಯಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಜನರನ್ನು ಪ್ರಚೋದನೆಗೊಳಿಸುವ ಕುಮ್ಮಕ್ಕು ನೀಡುತ್ತಿದ್ದಾರೆ. ಅವರ ಕುಮ್ಮಕ್ಕಿನಿಂದಲೇ ನಿನ್ನೆ ಇಂತಹ ಅವಘಡ ಸಂಭವಿಸಿದೆ ಎಂದು ದೂರಿದರು.
ಯಡಿಯೂರಪ್ಪನವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ತಾವು ಹೇಳಿದ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ಮಾಡಿದರು.
ಕುಮಾರಸ್ವಾಮಿ ಅವರು ಈಗ ತಮ್ಮ ಹೇಳಿಕೆಯನ್ನು ಹೊಸ ಅರ್ಥದೊಂದಿಗೆ ವ್ಯಾಖ್ಯಾನ ಮಾಡಲು ಹೊರಟಿದ್ದಾರೆ. ಇದು ಅವರ ಮಾನಸಿಕತೆಯನ್ನು ತೋರಿಸುತ್ತಿದೆ. ಜನರನ್ನು ಹುಚ್ಚೆಬ್ಬಿಸುವ ಹಂತಕ್ಕೆ ಇಳಿದಿರುವುದು ದುರ್ದೈವದ ಸಂಗತಿ. ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ರಾಹುಲ್ ಗಾಂಧಿ ಬಚ್ಚ: ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜಕಾರಣದಲ್ಲಿ ಇನ್ನು ಬಚ್ಚ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಹೇಳಿಕೆ ಕುರಿತಂತೆ ಕೂಡಲೇ ರಾಹುಲ್ ಗಾಂಧಿ ಕ್ಷಮಾಪಣೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇಂದಿನ ಯಾವುದೇ ಕಾಂಗ್ರೆಸ್ ನಾಯಕರು ಈ ರೀಡಿ ನಡೆದುಕೊಂಡಿರುವ ನಿದರ್ಶನಗಳಿಲ್ಲ. ಒಬ್ಬ ಎಐಸಿಸಿ ಅಧ್ಯಕ್ಷರಾಗಿ, ಸಂಸದರಾಗಿ ಪ್ರಧಾನಿ ಬಗ್ಗೆ ಅಗೌರವದಿಂದ ಮಾತನಾಡುವುದು ಸರಿಯಲ್ಲ. ಅವರ ವರ್ತನೆ ನೋಡಿದರೆ ರಾಜಕೀಯದಲ್ಲಿ ಇನ್ನು ಪರಿಪಕ್ವವಾಗಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.