
ತುಮಕೂರು,ಸೆ.21 ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಮೂರು ಪಕ್ಷಗಳ ದೊಂಬರಾಟಕ್ಕೆ ಎಡೆ ಮಾಡಿದ್ದು ತಕ್ಷಣ ರಾಜ್ಯಪಾಲರು ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತ ಹೇರಿ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಮಾಜಿ ಶಾಸಕ ಸೊಗಡು ಶಿವಣ್ಣ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಚುನಾವಣೆ ನಡೆದು ಕೇವಲ ನಾಲ್ಕು ತಿಂಗಳು ಕಳೆದಿದೆ. ರಾಜ್ಯದ ಜನ ಯಾವ ಪಕ್ಷಕ್ಕೂ ಬಹುಮತ ಕೊಟ್ಟಿಲ್ಲ. ಆದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿವೆ. ಈ ಪಕ್ಷಗಳ ಆಂತರಿಕ ಕಚ್ಚಾಟ ಭುಗಿಲೆದದ್ದಿದೆ.ಈ ಸಂದರ್ಭದಲ್ಲಿ ಬಿಜೆಪಿ ಕೂಡ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕೆ ಹೊರತು ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.
ಒಂದು ಕಡೆ ಕೊಡಗು ನೆರೆ ಹಾವಳಿಯಿಂದ ತತ್ತರಿಸಿದೆ. ಈ ಸಂದರ್ಭದಲ್ಲಿ ಜನರ ರಕ್ಷಣೆಗೆ ಹೋಗುವುದು ಬಿಟ್ಟು ರಾಜಕೀಯ ದೊಂಬರಾಟ ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ವಿರೋಧ ಪಕ್ಷದವರೂ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ. ಹಾಗಾಗಿ ರಾಜ್ಯಪಾಲರು ಕೂಡಲೇ ಸರ್ಕಾರವನ್ನೇ ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಬೇಕು. ಹೊಸದಾಗಿ ಚುನಾವಣೆ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಬೇಕೆಂದು ಆಗ್ರಹಿಸಿದರು.
ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರೆದಿದೆ. ತೈಲ ಬೆಲೆ ಗಗನಕ್ಕೇರಿದೆ. ಒಟ್ಟಾರೆ ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳು ಕಾಡುತ್ತಿವೆ. ಆಡಳಿತ ಹಾಗೂ ವಿರೋಧ ಪಕ್ಷದವರು ಜವಾಬ್ದಾರಿ ಮರೆತಿವೆ ಎಂದರು.
ಈ ಸಂದರ್ಭಗಳನ್ನು ಎಲ್ಲ ಪಕ್ಷಗಳು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿವೆ. ರಾಜಕೀಯ ವಿದ್ಯಮಾನಗಳು ವಾಕರಿಕೆ ತರುತ್ತಿವೆ ಎಂದು ಹೇಳಿದರು.
ಮಹಾನುಭಾವರು ಸಂವಿಧಾನ ರಚಿಸಿ ಪ್ರಜಾಪ್ರಭುತ್ವ ತಂದುಕೊಟ್ಟರು. ಆದರೆ ರಾಜಕೀಯ ಪಕ್ಷಗಳು ತತ್ವ, ಸಿದ್ದಾಂತಗಳನ್ನು ಗಾಳಿಗೆ ತೂರಿವೆ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಬಿ.ನಂದೀಶ್, ಕೆ.ಪಿ.ಮಹೇಶ್, ಗೋಪಾಲ್, ಜಯಸಿಂಹ, ತರಕಾರಿ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.