ತುಮಕೂರು,ಸೆ.21 ಶೋಷಿತ ಸಮುದಾಯಕ್ಕೆ ಅನ್ಯಾಯವಾದರೆ ನಾನು ಅಧಿಕಾರದಲ್ಲಿ ಒಂದು ಕ್ಷಣ ಉಳಿಯುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಘೋಷಿಸಿದರು.
ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಶೋಷಿತ ಸಮುದಾಯದ ಪ್ರತಿನಿಧಿಯಾಗಿ ಸರಕಾರದಲ್ಲಿ ಇರುವಾಗಲೇ ಬಡ್ತಿ ಮೀಸಲಾತಿ ಸೇರಿದಂತೆ ಯಾವುದೇ ವಿಧದಲ್ಲಿಯೂ ಸಮುದಾಯಕ್ಕೆ ಅನ್ಯಾಯವಾದರೆ ಅಂದೇ ರಾಜೀನಾಮೆ ನೀಡಿ ಹೊರಬರಲು ಸಿದ್ಧನಿದ್ದೇನೆ. ಶೋಷಿತ ಸಮುದಾಯಗಳ ಏಳ್ಗೆಗಾಗಿ ಆ ಕಾಲದಲ್ಲಿಯೇ ಅಂಬೇಡ್ಕರ್ ರಾಜೀನಾಮೆ ಕೊಟ್ಟಿರುವಾಗ,ನನ್ನ ರಾಜೀನಾಮೆ ಯಾವ ಲೆಕ್ಕ.ಪರಮೇಶ್ವರ್‍ಗೆ ಶಕ್ತಿ ಇಲ್ಲ ಎಂದು ಯಾರಾದರೂ ತಿಳಿದುಕೊಂಡಿದ್ದರೆ ನಾನು ಅವರಿಗೆ ಎಚ್ಚರಿಕೆ ಕೊಡಲು ಬಯಸುತ್ತೇನೆ. ನಾನು ಕೂಡ ಸಂಘಟನಾತ್ಮಕ ಶಕ್ತಿ ಹೊಂದಿದ್ದೇನೆ ಎಂದು ವಿರೋಧಿಗಳಿಗೆ ಪರೋಕ್ಷವಾಗಿ ಪರಮೇಶ್ವರ್ ಎಚ್ಚರಿಕೆಯ ಸಂದೇಶ ರವಾನಿಸಿದರು.
ಎಡ, ಬಲ,ಮಧ್ಯಮ ಎಂದು ಎಲ್ಲಿಯೂ ಸಂವಿಧಾನದಲ್ಲಿ ಹೇಳಿಲ್ಲ.ನಾವೆಲ್ಲರೂ ಸೇರಿದರೆ ಒಂದು ಶಕ್ತಿಯಾಗುತ್ತದೆ.ಸಂಘಟಿತರಾಗಿ ಮುನ್ನೆಡೆದರೆ ಮಾತ್ರ ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದರು.
ಮೀಸಲಾತಿ ಸಂಬಂಧ ರಾಜ್ಯ ಸರಕಾರ ಮಾಡಿದ ಶಾಸನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ನೀಡದರೂ ಶಾಸನ ಕಾನೂನು ರೂಪ ಪಡೆದುಕೊಂಡಿಲ್ಲ, ನಾವು ಎಚ್ಚರಿಕೆಯಿಂದ ಇರಬೇಕು ಎಂದರು.
ದೇಶದಲ್ಲಿ ಜಾತಿ ವ್ಯವಸ್ಥೆ ನಾಶವಾಗುವವರೆಗೆ ಅಭಿವೃದ್ಧಿ ಸಾಧ್ಯವಿಲ್ಲ, ಮುಂದಿನ ಪೀಳಿಗೆ ಯಾವುದೇ ಶೋಷಣೆ ಇಲ್ಲದೆ ಬದುಕುವಂತಾಗಬೇಕು, ಇದಕ್ಕೆ ನೀವೆಲ್ಲರೂ ಸುಶಿಕ್ಷಿತರಾಗಬೇಕೆಂದು ಡಾ.ಜಿ.ಪರಮೇಶ್ವರ್ ಕರೆ ನೀಡಿದರು.
ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ,ನಮ್ಮ ಸಮುದಾಯ ಒಂದಾಗಬೇಕಿದೆ.16 ಮಂದಿ ಶಾಸಕರಿದ್ದರೂ ಕಾರ್ಯಕ್ರಮಕ್ಕೆ ಬಂದಿಲ್ಲ.ಪಕ್ಷದ ಯಾವುದೇ ಇರಲಿ,ಸಮುದಾಯಕ್ಕೆ ಗೌರವ ಕೊಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಛಲವಾದಿ ಮುಖಂಡ ಭಾನು ಪ್ರಕಾಶ್ ಮಾತನಾಡಿ, ನಿಗಮ-ಮಂಡಲಿ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯ ಛಲವಾದಿಗಳನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಸ್.ದಿನೇಶ್, ತಾ.ಪಂ. ಅಧ್ಯಕ್ಷ ಗಂಗಾಜೀನಯ್ಯ, ಪಾಲಿಕೆ ಸದಸ್ಯೆ ಪ್ರಭಾವತಿ ಸುಧೀಶ್ವರ್, ಜಿಪಂ ಸದಸ್ಯೆ ಮಂಜುಳಾ,ದೊಡ್ಡನಂಜಯ್ಯ, ಗಂಗಧಾರ್, ಬಿ.ಜಿ.ನಿಂಗರಾಜು,ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್,ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಅಧ್ಯಕ್ಷ ಸೋಮಶೇಖರ್, ಮುಖಂಡರಾರದ ಸುರೇಶ್, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಾಷ್ಟ್ರೀಯ ಪರಿಸರ ಪ್ರಶಸ್ತಿ ಪುರಸ್ಕøತ ಸಾಲಮರದ ತಿಮ್ಮಕ್ಕ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಛಲವಾದಿ ಬಂಧುಗಳು ಭಾಗವಹಿಸಿದ್ದರು.