ರಾಜ್ಯದಲ್ಲಿ ಇನ್ನೂ ನಿಂತಿಲ್ಲ ಆಪರೇಷನ್ ಕಮಲ?; 18 ರಿಂದ 20 ಶಾಸಕರನ್ನು ಸೆಳೆದಿದ್ಯಂತೆ ಬಿಜೆಪಿ?

ಬೆಂಗಳೂರು: ರಾಜ್ಯದಲ್ಲಿ ಆಪರೇಷನ್ ಕಮಲ ಮತ್ತೆ ನಡೆಯುತ್ತಿದ್ಯಾ..? ಜಾರಕಿಹೊಳಿ ಬ್ರದರ್ಸ್ ಸುಮ್ಮನಾದ್ರೂ ಶಾಸಕರನ್ನು ಸೆಳೆಯಲಾಗುತ್ತಿದ್ಯಾ..? ಸರ್ಕಾರ ಅಸ್ಥಿರತೆಗೆ ಬಿಜೆಪಿ ಮುಖಂಡರು ಮುಂದಾಗಿದ್ದಾರಾ…? ಎಂಬ ಅನುಮಾನ ಮತ್ತೆ ದಟ್ಟವಾಗುತ್ತಿದೆ.

ಕಾಂಗ್ರೆಸ್‍ನ 18 ರಿಂದ 20 ಶಾಸಕರನ್ನ ಬಿಜೆಪಿ ಸೆಳೆದಿದೆ ಎನ್ನಲಾಗುತ್ತಿದ್ದು, ಎಲ್ಲರನ್ನು ಮಹಾರಾಷ್ಟ್ರದ ರೆಸಾರ್ಟ್ ಗಳಿಗೆ ಕರೆದುಕೊಂಡು ಹೋಗಿದೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ. ಸಿಎಂ ಕುಮಾರಸ್ವಾಮಿ ಸಹ ಎರಡು ಬಾರಿ ಬಿಜೆಪಿಯ ರೆಸಾರ್ಟ್ ರಾಜಕಾರಣದ ಬಗ್ಗೆ ಮಾತನಾಡಿದರು. ಸಿಎಸ್ ಶಿವಳ್ಳಿ ಮತ್ತು ಸುರೇಶ್ ಗೌಡರಿಗೆ ಫೋನ್ ಮಾಡಿ ಬಿಜೆಪಿ ಗಾಳ ಹಾಕಲು ಯತ್ನಿಸಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಶಾಸಕ ಶಿವಳ್ಳಿ, ಬಿಜೆಪಿ ಅಮಿಷ ಒಡ್ಡಿರೋದು ನಿಜ ಅಂದರು. ಅಲ್ಲದೇ ನಾವೇನು ಮಾರ್ಕೆಟ್‍ನಲ್ಲಿಟ್ಟ ಬದನೆಕಾಯಿ ಅಲ್ಲ. ವ್ಯಾಪಾರ ಮಾಡೋಕೆ ಅಂತಾ ಕಿಡಿಕಾರಿದ್ರು. ಇತ್ತ ದೆಹಲಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ನಾಯಕರು ಲಜ್ಜೆಗೆಟ್ಟವರು. ತತ್ವ ಸಿದ್ಧಾಂತ ಮಾತನಾಡ್ತಾರೆ. ಚುನಾವಣೆ ಸೋತ ಮೇಲೆ ಮಾನ ಮರ್ಯಾದೆಯಿಂದ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು. ಅದನ್ನ ಬಿಟ್ಟು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಲ್ಲಿ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ ನಾವ್ಯಾರು ಮುಂಬೈಗೆ ಹೋಗಿಲ್ಲ. ನಾಗೇಂದ್ರ ಕೂಡ ಇಲ್ಲೇ ಇದ್ದಾರೆ ಅಂತ ಸ್ಪಷ್ಟಪಡಿಸಿದ್ದಾರೆ. ಇವರೆಲ್ಲರ ಹೇಳಿಕೆಗಳು ಆಪರೇಷನ್ ಕಮಲಕ್ಕೆ ಪುಷ್ಟಿ ನೀಡುತ್ತಿವೆ. ಬಿಜೆಪಿ ನಾಯಕರು ಮಾತ್ರ ನಾವು ಯಾವ ಆಪರೇಷನ್ ಮಾಡುತ್ತಿಲ್ಲ. ಸರ್ಕಾರವನ್ನ ಅಸ್ಥಿರನೂಗೊಳಿಸ್ತಿಲ್ಲ ಅಂತಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ