ಬೆಂಗಳೂರು, ಸೆ.21 ರಾಜ್ಯದ ಅಭಿವೃದ್ಧಿಗೆ ಅಡಚಣೆ ಮಾಡಿ, ಸರ್ಕಾರ ಅಸ್ಥಿರಗೊಳಿಸಲು ನಿರಂತರ ಪ್ರಯತ್ನ ಮಾಡುತ್ತಿರುವ ಬಿಜೆಪಿ ವಿರುದ್ಧ ಜನರು ದಂಗೆ ಏಳಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ವಲಯದಲ್ಲೇ ಅಸಮಾಧಾನ ಉಂಟಾಗಿದೆ.
ಒಂದು ಕಡೆ ಕುಮಾರಸ್ವಾಮಿಯವರ ದಂಗೆ ಪದ ಒಪ್ಪುವಂಥದ್ದಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದುದು ಸರ್ಕಾರದ ಜವಾಬ್ದಾರಿ. ಅದನ್ನು ಬಿಟ್ಟು ಉದ್ವೇಗಕ್ಕೆ ಒಳಗಾಗಿ ಈ ರೀತಿ ಮಾತನಾಡಬಾರದು. ಪ್ರತಿಯೊಂದು ಹೇಳಿಕೆಗೂ ರಿಯಾಕ್ಟ್ ಮಾಡಬಾರದು. ರಿಯಾಕ್ಟ್ ಮಾಡಿ ಅನಗತ್ಯ ಗೊಂದಲಗಳಿಗೆ ಸಿಕ್ಕಿಹಾಕಿಕೊಳ್ಳುವುದು ಸಮಂಜಸವಲ್ಲ. ವಿರೋಧ ಪಕ್ಷದವರು ಏನೇ ಹೇಳಿದರೂ ಸಂಯಮ ಕಳೆದುಕೊಳ್ಳಬಾರದು. ಸಿಎಂ ಎಚ್ಚರಿಕೆಯಿಂದ ಮಾತನಾಡಬೇಕೆಂಬುದೇ ಬಿಜೆಪಿ ಉದ್ದೇಶ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳದಿದ್ದರೆ ಹೀಗಾಗುತ್ತದೆ. ಇದು ಸಮ್ಮಿಶ್ರ ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸಮ್ಮಿಶ್ರ ಸರ್ಕಾರ ಸದಾ ಗೊಂದಲ್ಲಿರಬೇಕು. ನಾವು ಮಾಡುವ ಉತ್ತಮ ಕೆಲಸಕ್ಕೆ ಸದಾ ಅಡ್ಡಗಾಲು ಹಾಕುವುದೇ ಅವರ ಕೆಲಸ. ಅದಕ್ಕಾಗಿ ಬಿಜೆಪಿಯವರು ಪ್ರಚೋದನೆ ಮಾಡುತ್ತಾರೆ. ಆ ಪ್ರಚೋದನೆಗೆ ಮುಖ್ಯಮಂತ್ರಿಯವರು ಯಾವುದೇ ಕಾರಣಕ್ಕೂ ಒಳಗಾಗಬಾರದು. ಎಲ್ಲ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಬಾರದು. ಅದರಲ್ಲೂ ದಂಗೆ ಏಳುವಂತೆ ಕರೆ ಕೊಡುತ್ತೇನೆ ಎಂದು ನೀಡಿರುವ ಹೇಳಿಕೆ ಮುಜುಗರ ಉಂಟುಮಾಡುತ್ತದೆ ಎಂದು ಮೈತ್ರಿ ಪಕ್ಷ ಕಾಂಗ್ರೆಸ್ನವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಷ್ಟೇ ಭಿನ್ನಮತ, ಬಂಡಾಯದಿಂದ ಹೊರಬಂದಿದ್ದೇವೆ. ಈ ಸಂದರ್ಭದಲ್ಲಿ ತಾವು ನೀಡಿರುವ ಹೇಳಿಕೆ ಪ್ರತಿಪಕ್ಷ ಬಿಜೆಪಿಗೆ ಪ್ರತಿಭಟನೆಯ ಅಸ್ತ್ರ ಕೊಟ್ಟಂತಾಗಿದೆ. ಹಾಗಾಗಿ ತಾಳ್ಮೆ ಮತ್ತು ಸಂಯಮ ವಹಿಸಬೇಕು. ಎಲ್ಲದಕ್ಕೂ ಪ್ರತಿಕ್ರಿಯೆ ನೀಡಬಾರದು. ತಮ್ಮ ಬಳಿ ಎಲ್ಲ ಮಾಹಿತಿಗಳಿರುತ್ತವೆ. ಆಡಳಿತಾತ್ಮಕವಾಗಿ ಎದುರಿಸಬೇಕು ಮತ್ತು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕು. ಈ ಸಂದರ್ಭ ವ್ಯವಧಾನ ಮುಖ್ಯವಾಗಿರುತ್ತದೆ. ಅದನ್ನು ಬಿಟ್ಟು ಬಹಿರಂಗವಾಗಿ ಹೇಳಿಕೆಗಳನ್ನು ನೀಡಬಾರದು ಎಂದು ಕಾಂಗ್ರೆಸ್ನ ಹಲವು ನಾಯಕರು ಸಲಹೆ ಮಾಡಿದ್ದಾರೆ.
ಸರ್ಕಾರವನ್ನು ಕಿಂಗ್ಪಿನ್ಗಳ ಮೂಲಕ ಅಸ್ಥಿರಗೊಳಿಸುವ ಪ್ರಯತ್ನ ತಮಗೆ ಗೊತ್ತಾಗಿತ್ತು. ಅದರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಂಡು ಸದ್ದಿಲ್ಲದೆ ಬಗ್ಗುಬಡಿಯಬೇಕಾಗಿತ್ತು. ಬಹಿರಂಗ ಹೇಳಿಕೆ ನೀಡಿದ್ದರಿಂದ ಈಗ ಕ್ರಮ ಕೈಗೊಂಡರೂ ಅದು ರಾಜಕೀಯ ದುರುದ್ದೇಶ ಎಂದು ಪ್ರತಿಪಕ್ಷ ಬಿಂಬಿಸುತ್ತದೆ. ದಂಗೆ ಹೇಳಿಕೆಯನ್ನು ಜೀವಂತವಾಗಿಟ್ಟು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರ ಗೊಳಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುವುದು ಬಿಜೆಪಿಯ ಲೆಕ್ಕಾಚಾರವಾಗಿದೆ. ನಾವು ಮಾಡುವ ಯಾವುದೇ ಒಳ್ಳೆಯ ಕೆಲಸ ಪ್ರಚಾರಕ್ಕೆ ಬರದಂತೆ ತಡೆಯುವ ತಂತ್ರ ಮಾಡುತ್ತಿದೆ. ಹಾಗಾಗಿ ತಾವು ಸಂಯಮ ಮತ್ತು ನಾಜೂಕಾಗಿ ತಮ್ಮ ಜವಾಬ್ದಾರಿ ನಿಭಾಯಿಸಬೇಕಾಗಿದೆ.
ಬಿಜೆಪಿಯವರು ಉದ್ದೇಶಪೂರ್ವಕವಾಗಿಯೇ ಪ್ರಚೋದಿಸುವಂತಹ ಕೆಲಸ ಮಾಡುತ್ತಾರೆ. ಎಚ್ಡಿಕೆ ಅವರು ಸಾಕಷ್ಟು ಸಂಯಮದಿಂದ ಇರಬೇಕಾಗುತ್ತದೆ. ಅಧಿಕಾರದಲ್ಲಿರುವ ತಾವು ಈ ರೀತಿ ಬಹಿರಂಗ ಹೇಳಿಕೆಗಳನ್ನು ನೀಡಿದರೆ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸೂಕ್ಷ್ಮ ಪರಿಸ್ಥಿತಿಗಳು ಎದುರಾದಾಗ ದೇವೇಗೌಡರು, ಸಿದ್ದರಾಮಯ್ಯ ಮತ್ತಿತರ ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಲಹೆ ಪಡೆಯಿರಿ ಎಂದು ಹೇಳಿದ್ದಾರೆ.