ಬೆಂಗಳೂರು, ಸೆ.21 ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಟಾರ್ಜ್ ಆದ ಬೆನ್ನಲ್ಲೇ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ರಾಜಕೀಯವಾಗಿ ಸಕ್ರಿಯವಾಗಿದ್ದು ಸಮ್ಮಿಶ್ರ ಸರ್ಕಾರದ ಬೆನ್ನಿಗೆ ನಿಂತಿದ್ದಾರೆ.
ಆಪರೇಷನ್ ಕಮಲಕ್ಕೆ ಸಿಲುಕಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದ್ದ ಬಳ್ಳಾರಿ ಜಿಲ್ಲೆ ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್ ಅವರನ್ನು ತಮ್ಮ ಮನೆಗೆ ಕರೆಸಿಕೊಂಡ ಡಿ.ಕೆ.ಶಿವಕುಮಾರ್ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಚರ್ಚೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಗಣೇಶ್, ನಾನು ಕಾಂಗ್ರೆಸ್ನಲ್ಲೇ ಇರುತ್ತೇನೆ, ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ, ಬಿಜೆಪಿಯವರು ನನ್ನನ್ನು ಸಂಪರ್ಕಿಸುವ ಧೈರ್ಯ ಮಾಡುವುದಿಲ್ಲ, ಆಪರೇಷನ್ ಕಮಲಕ್ಕೆ ತುತ್ತಾಗಿದ್ದೇನೆ ಎಂದು ಹೇಳುವುದೆಲ್ಲ ಸುಳ್ಳು ಎಂದು ತಿಳಿಸಿದರು.
ಬೆಳಗಾವಿಯ ಜಾರಕಿಹೊಳಿ ಸಹೋದರರು ಶಾಸಕ ನಾಗೇಂದ್ರ ಅವರನ್ನು ಜೊತೆಯಲ್ಲಿಟ್ಟುಕೊಂಡು ಕೆಲಕಾಲ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಿಡಿದಿದ್ದರು, ಬಳ್ಳಾರಿ ಉಸ್ತುವಾರಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ಅವರು, ಜಿಲ್ಲೆಯ ಉಳಿದ ಶಾಸಕರನ್ನು ನಿರಂತರವಾಗಿ ಸಂಪರ್ಕಿಸಿ ಚರ್ಚೆ ನಡೆಸುತ್ತಿದ್ದರು.
ಗಣೇಶ್ ಅವರು ಶಾಸಕ ನಾಗೇಂದ್ರ ಅವರ ಸಂಬಂಧಿಯಾಗಿದ್ದು ಇಂದು ಡಿ.ಕೆ.ಶಿವಕುಮಾರ್, ಗಣೇಶ್ ಅವರೊಂದಿಗೆ ಚರ್ಚೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ನಾಗೇಂದ್ರ ಅವರು ರಮೇಶ್ ಜಾರಕಿಹೊಳಿ ಅವರನ್ನು ಹೊರತು ಪಡಿಸಿ ಉಳಿದ ಯಾವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡದೆ ತಮ್ಮ ಪಾಡಿಗೆ ತಾವಿದ್ದಾರೆ.
ಈ ಮಧ್ಯೆ ಜಾರಕಿಹೊಳಿ ಸಹೋದರರ ಬೆಂಬಲಿಗರ ಪೈಕಿ ಒಬ್ಬರನ್ನೇ ಸಂಪರ್ಕಿಸಿ ಬೆಳಗಾವಿಯ ಪಾರುಪಥ್ಯವನ್ನು ಮುರಿದು ಹಾಕುವ ಪ್ರಯತ್ನ ನಡೆಯುತ್ತಿದೆ. ಅದರ ಮೊದಲ ಯತ್ನವಾಗಿ ಗಣೇಶ್ ಅವರೊಂದಿಗೆ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದ್ದಾರೆ.
ಇದಕ್ಕೂ ಮುನ್ನ ನಿನ್ನೆ ರಾತ್ರಿ ಡಿ.ಕೆ.ಶಿವಕುಮಾರ್ ಅವರು, ಮಾಜಿ ಪ್ರಧಾನಿ ದೇವೇಗೌಡರು, ಕಾಂಗ್ರೆಸ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಅವರ ಜೊತೆ ರಹಸ್ಯ ಸಭೆ ನಡೆಸಿದರು.
ಅನಾರೋಗ್ಯದಿಂದ ವಿಶ್ರಾಂತಿಯಲ್ಲಿದ್ದೇನೆ ಎಂದು ಹೇಳುತ್ತಲೇ ಡಿ.ಕೆ.ಶಿವಕುಮಾರ್ ಕಾರ್ಯಾಚರಣೆಗಿಳಿದಿರುವುದು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಆನೆಬಲ ಬಂದಂತಾಗಿದೆ.