ಬೆಂಗಳೂರು, ಸೆ.21ಬಿಬಿಎಂಪಿ ಮೇಯರ್ ಚುನಾವಣೆ ಸಮೀಪಿಸುತ್ತಿದ್ದಂತೆ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಮಾಜಿ ಸಚಿವ ರಾಮಲಿಂಗಾರೆಡ್ಡಿಯವರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಂಬಂಧವಾಗಿ ರಾಮಲಿಂಗಾರೆಡ್ಡಿ ಮತ್ತು ಪರಮೇಶ್ವರ್ ಅವರ ನಡುವೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಮುಸುಕಿನ ಗುದ್ದಾಟ ನಡೆದಿತ್ತು.
ಬೆಂಗಳೂರು ಉಸ್ತುವಾರಿ ಸಚಿವರಾದ ಪರಮೇಶ್ವರ್ ಅವರು ನಗರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಕರೆಯುವ ಯಾವ ಸಭೆಯಲ್ಲಿ ಭಾಗವಹಿಸದೆ ರಾಮಲಿಂಗಾರೆಡ್ಡಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದರು.
ಒಂದು ಕಾಲದಲ್ಲಿ ಆತ್ಮೀಯ ಮಿತ್ರರಾಗಿದ್ದ ಇವರಿಬ್ಬರು ಇತ್ತೀಚಿನ ದಿನಗಳಲ್ಲಿ ಕನಿಷ್ಠ ದೂರವಾಣಿಯಲ್ಲೂ ಮಾತುಕತೆ ನಡೆಸದಂತೆ ಅಸಹನೆ ಬೆಳೆಸಿಕೊಂಡಿದ್ದರು. ಕಾಕತಾಳೀಯವೆಂಬಂತೆ ರಾಮಲಿಂಗಾರೆಡ್ಡಿ ಅವರನ್ನು ಸಂಪುಟದಿಂದ ಹೊರಗಡೆ ಇಟ್ಟಿದ್ದು ಇನ್ನಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು ಅದನ್ನು ತಣಿಸಲು ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿಗೆ ಜಯನಗರ ವಿಧಾನಸಭೆಯ ಟಿಕೆಟ್ ನೀಡಿ ಸಮಾಧಾನಪಡಿಸುವ ಪ್ರಯತ್ನ ನಡೆದಿತ್ತು ಆದರೂ ರಾಮಲಿಂಗಾರೆಡ್ಡಿ ತಮ್ಮ ಹಠವನ್ನು ಬಿಟ್ಟಿರಲಿಲ್ಲ. ಪರಮೇಶ್ವರ್ ಅವರು ಮನವೊಲಿಸುವ ಯತ್ನ ನಡೆಸಿರಲಿಲ್ಲ.
ಸೆಪ್ಟೆಂಬರ್ 28ಕ್ಕೆ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ, ಅದಕ್ಕೂ ಮುನ್ನ ಸೆ.26 ರಂದು ಕಾಂಗ್ರೆಸ್ನ ಬೆಂಗಳೂರು ನಗರದ ಶಾಸಕರು, ಬಿಬಿಎಂಪಿ ಸದಸ್ಯರ ಸಭೆ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪರಮೇಶ್ವರ್, ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಉಪಮುಖ್ಯಮಂತ್ರಿಯೂ ಆಗಿರುವ ಪರಮೇಶ್ವರ್ ಅವರಿಗೆ ಮೇಯರ್ ಆಯ್ಕೆ ಅತ್ಯಂತ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಪರಮೇಶ್ವರ್ ಅವರು ಬೆಂಗಳೂರು ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೇ ಆಗಿದ್ದರೂ ಈಗಲೂ ಬಿಬಿಎಂಪಿ ರಾಮಲಿಂಗಾರೆಡ್ಡಿ ಅವರ ಹಿಡಿತದಲ್ಲೇ ಇದೆ. ಹೀಗಾಗಿ ಹೊಂದಾಣಿಕೆ ಮಾಡಿಕೊಳ್ಳದೆ ಇದ್ದರೆ ಮೇಯರ್ ಆಯ್ಕೆಯಲ್ಲಿ ಗೊಂದಲವಾಗುವ ಆತಂಕ ಉಂಟಾಗಿತ್ತು.
ಬಿಬಿಎಂಪಿ ಮೇಯರ್ಗೆ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿದ್ದು ಲಿಂಗಾಯತ ಸಮುದಾಯದ ಗಂಗಾಂಭಿಕೆ, ಒಕ್ಕಲಿಗ ಸಮುದಾಯದ ಸೌಮ್ಯ ಶಿವಕುಮಾರ್ ನಡುವೆ ಪ್ರಬಲವಾದ ಪೈಪೆÇೀಟಿ ಇದೆ. ಉಳಿದಂತೆ ಲಾವಣ್ಯ ಗಣೇಶ್ರೆಡ್ಡಿ, ಲತಾಕುಮಾರ್ ರಾಥೋಡ್ ಅವರೂ ಕೂಡ ಮೇಯರ್ ರೇಸ್ನಲ್ಲಿದ್ದಾರೆ.
ರಾಮಲಿಂಗಾರೆಡ್ಡಿ ಅವರು ಗಂಗಾಂಭಿಕೆ ಅವರನ್ನೇ ಮೇಯರ್ ಮಾಡಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಇತ್ತ ಒಕ್ಕಲಿಗ ಸಮುದಾಯಕ್ಕೆ 26 ವರ್ಷಗಳಿಂದಲೂ ಮೇಯರ್ ಸ್ಥಾನ ಕೊಟ್ಟಿಲ್ಲ, ಅಪರೂಪಕ್ಕೊಮ್ಮೆ ಮೀಸಲಾತಿ ಸೌಭಾಗ್ಯ ಸಿಕ್ಕಿದೆ ಸೌಮ್ಯ ಶಿವಕುಮಾರ್ ಅವರನ್ನೇ ಮೇಯರ್ ಮಾಡಬೇಕೆಂಬ ಒತ್ತಡ ಕೇಳಿಬರುತ್ತಿದೆ.
ಪರಮೇಶ್ವರ್ ಅವರು ಕೂಡ ಸೌಮ್ಯ ಶಿವಕುಮಾರ್ ಪರವಾಗಿದ್ದು ಮೇಯರ್ ಆಯ್ಕೆಗೆ ಬೆಂಬಲ ನೀಡುತ್ತಿರುವ ಜೆಡಿಎಸ್ ವಲಯದಿಂದಲೂ ಸೌಮ್ಯ ಶಿವಕುಮಾರ್ ಅವರ ಹೆಸರು ಕೇಳಿಬರುತ್ತಿದೆ. ಹೀಗಾಗಿ ಇಂದು ಪರಮೇಶ್ವರ್ ಅವರು ಖುದ್ದಾಗಿ ರಾಮಲಿಂಗಾರೆಡ್ಡಿ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ, ಅವರೊಂದಿಗೆ ಉಪಹಾರ ಸೇವಿಸಿದ್ದಾರೆ, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಇಬ್ಬರೂ ರಹಸ್ಯ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಈಗ ಪರಮೇಶ್ವರ್ ಅವರ ಅಭ್ಯರ್ಥಿ ಗೆಲ್ಲುತ್ತಾರೋ? ಅಥವಾ ರಾಮಲಿಂಗಾರೆಡ್ಡಿ ಅವರ ಮಾತೇ ಅಂತಿಮಗೊಳ್ಳಲಿದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.