
ಮಂಡ್ಯ,ಸೆ.21 ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಬೇಸರಗೊಂಡ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ವರುಣಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಕೆಆರ್ಎಸ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಮೈಸೂರಿನ ಎನ್.ಆರ್.ಮೊಹಲ್ಲಾದ ಹಾಲಿನ ವ್ಯಾಪಾರಿ ಕುಮಾರ್ ಎಂಬುವರ ಪತ್ನಿ ಕಮಲ(45), ಮಕ್ಕಳಾದ ವೈಷ್ಣವಿ(17) ಮತ್ತು ವರ್ಷ(14) ಆತ್ಮಹತ್ಯೆಗೆ ಶರಣಾಗಿರುವ ನತದೃಷ್ಟರು.
ಘಟನೆ ವಿವರ:
ಎನ್.ಆರ್.ಮೊಹಲ್ಲಾದ ಇವರ ಮನೆ ಬಳಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಕುಟುಂಬದವರೆಲ್ಲ ಪೂಜೆಗಾಗಿ ಅಲ್ಲಿ ಹೋಗಿದ್ದಾಗ ಇವರ ಇಬ್ಬರು ಹೆಣ್ಣು ಮಕ್ಕಳು ಗಣೇಶ ಮೂರ್ತಿ ಬಳಿ ಸೆಲ್ಫಿ ತೆಗೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪರಿಚಯಸ್ಥ ಯುವಕರು ವರ್ಷ ಹಾಗೂ ವೈಷ್ಣವಿ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಇದನ್ನು ಕಂಡ ವೈಷ್ಣವಿ ತಂದೆ ಕುಮಾರ್ ಅವರು ಮನೆಗೆ ಹೋಗಿ ತರಾಟೆಗೆ ತೆಗೆದುಕೊಂಡು ಕಾಲೇಜಿಗೆ ಹೋಗದಂತೆ ತಾಕೀತು ಮಾಡಿದ್ದಾರೆ.
ಅಲ್ಲದೆ ಪತ್ನಿ ಜೊತೆಯೂ ಇದೇ ವಿಚಾರವಾಗಿ ಜಗಳವಾಡಿ ಹೊರಗಡೆ ಹೋಗದಂತೆ ನಿಂದಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಮನನೊಂದ ಕಮಲ ಸಂಜೆ 7 ಗಂಟೆಯಲ್ಲಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕರೆದುಕೊಂಡು ಕೆಆರ್ಎಸ್ ಬಸ್ ಹತ್ತಿದ್ದಾರೆ.
ಇದನ್ನು ಗಮನಿಸಿದ್ದ ನೆರೆಮನೆಯವರು ತಾಯಿ, ಮಕ್ಕಳು ಬಸ್ನಲ್ಲಿ ಹೋಗಿದ್ದನ್ನು ಕುಮಾರ್ಗೆ ತಿಳಿಸಿದ್ದಾರೆ. ತಕ್ಷಣ ಕುಮಾರ್ ಮತ್ತೊಂದು ಬಸ್ ಹತ್ತಿ ಹಿಂಬಾಲಿಸಿ ಹೋಗಿದ್ದಾರೆ.
ಅಷ್ಟರಲ್ಲಿ ಕುಪ್ಪೇದಳ ಗ್ರಾಮದ ಬಳಿ ತಾಯಿ, ಮಕ್ಕಳು ಬಸ್ ಇಳಿದು ವರುಣಾ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕುಮಾರ್ ಹೋಗುತ್ತಿದ್ದ ಬಸ್ ಕುಪ್ಪೇದಳ ಗ್ರಾಮಕ್ಕೆ ಬರುತ್ತಿದ್ದಂತೆ ಜನರು ಗುಂಪು ಗಟ್ಟಿರುವುದನ್ನು ಗಮನಿಸಿ ಕುಮಾರ್ ಬಸ್ ಇಳಿದು ಸಮೀಪ ಹೋಗಿ ನೋಡಿದಾಗ ಪತ್ನಿ ಹಾಗೂ ಮಕ್ಕಳು ನಾಲೆಗೆ ಹಾರಿರುವುದು ಗೊತ್ತಾಗಿದೆ.
ವಿಷಯ ತಿಳಿದ ಕೆಆರ್ಎಸ್ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಕತ್ತಲೆಯಾಗಿದ್ದರಿಂದ ಶವಗಳನ್ನು ಹುಡಕಲು ಸಾಧ್ಯವಾಗದೆ ಇಂದು ಮುಂಜಾನೆಯಿಂದಲೇ ಶವಕ್ಕಾಗಿ ಶೋಧ ನಡೆಸಿದ್ದು, ಬೆಳಗ್ಗೆ 9 ಗಂಟೆ ಸಮಯದಲ್ಲಿ ಕಮಲ ಹಾಗೂ ವೈಷ್ಣವಿ ಶವ ಪತ್ತೆಯಾಗಿದೆ. ವರ್ಷಾ ಶವಕ್ಕಾಗಿ ಶೋಧ ಮುಂದುವರೆದಿದೆ.