ಸಿಎಂ ವಿರುದ್ಧ ರಾಜದ್ರೋಹ ದೂರು

ಬೆಂಗಳೂರು,ಸೆ.21 ದಂಗೆ ಏಳಬೇಕೆಂದು ಪ್ರಚೋದನಕಾರಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ರಾಜದ್ರೋಹದ ದೂರು ದಾಖಲಿಸಿ ಪೆÇಲೀಸರು ಕಾನೂನು ಕ್ರಮ ಜರುಗಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ಮುಖ್ಯಮಂತ್ರಿಗಳ ಹೇಳಿಕೆಯನ್ನು ಖಂಡಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿಗಳೇ ಕಾನೂನು ಸುವ್ಯವಸ್ಥೆ ಹಾಳಾಗುವಂತೆ ಕರೆ ನೀಡಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಈಗಾಗಲೇ ಬಿಜೆಪಿ ನಮ್ಮ ಪಕ್ಷದ ವತಿಯಿಂದ ರಾಜ್ಯಪಾಲರು ಹಾಗೂ ರಾಜ್ಯ ಪೆÇಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಾಗಿದೆ. ಅವರ ವಿರುದ್ಧ ರಾಜದ್ರೋಹ ಮೊಕದ್ದಮೆ ದಾಖಲಿಸಬೇಕೆಂದು ಆಗ್ರಹ ಮಾಡಿದರು.
ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ಕುಮಾರಸ್ವಾಮಿ ಬಾಯಿಗೆ ಬಂದಂತೆ ನಾಲಿಗೆ ಮೇಲೆ ಹಿಡಿತ ಇಲ್ಲದವರಂತೆ ಮಾತನಾಡುತ್ತಿದ್ದಾರೆ. ನಿಮ್ಮ ಹೇಳಿಕೆಯಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಯಡಿಯೂರಪ್ಪನವರ ನಿವಾಸಕ್ಕೆ ನುಗ್ಗಿದ್ದು. ಅವರಿಗೆ ಏನಾದರೂ ಹೆಚ್ಚುಕಮ್ಮಿಯಾಗಿದ್ದರೆ ಯಾರು ಹೊಣೆ. ವಿಧಾನಸಭೆಯ ಪ್ರತಿಪಕ್ಷದ ನಾಯಕರಿಗೆ ರಕ್ಷಣೆ ಇಲ್ಲ ಅಂದರೆ ಸಾಮಾನ್ಯ ಜನರ ಗತಿಯೇನು ಎಂದು ಪ್ರಶ್ನಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ನನಗೆ ನಂಬಿಕೆ ಇಲ್ಲ ಎಂದು ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್ ಹೇಳುತ್ತಾರೆ. ನಿಮ್ಮ ಸರ್ಕಾರದಲ್ಲಿರುವ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ನಮ್ಮಲ್ಲಿ ಗೂಬೆ ಕೂರಿಸುವ ಕೆಲಸ ಮಾಡಬೇಡಿ. ಕೆಲವು ಸಚಿವರ ನಡವಳಿಕೆಯಿಂದ ಅನೇಕರು ಬೇಸತ್ತಿದ್ದಾರೆ. ಸರ್ಕಾರದ ಬುಡ ಅಲುಗಾಡುತ್ತದೆ ಎಂದು ತಿಳಿದಿರುವ ಕುಮಾರಸ್ವಾಮಿ ತಾಳ್ಮೆ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪಕ್ಷದ ಮುಖಂಡ ಆರ್.ಅಶೋಕ್ ಮಾತನಾಡಿ, ಧಂಗೆ ಹೇಳಿ ಎಂದು ಕರೆ ಕೊಡುವುದು ನಕ್ಸಲೀಯರು ಮತ್ತು ಸಮಾಜಘಾತುಕರು. ಮುಖ್ಯಮಂತ್ರಿಗಳು ಇಂಥ ಹೇಳಿಕೆ ಕೊಟ್ಟಿರುವುದು ಇದೇ ಮೊದಲು. ನಿಮಗೆ ತಾಕ್ಕತಿದ್ದರೆ ನಿಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಿ ಎಂದು ಸವಾಲೆಸೆದರು.
ಸ್ವತಃ ಮುಖ್ಯಮಂತ್ರಿಗಳೇ 15-18ರಿಂದ ಶಾಸಕರು ಮುಂಬೈ-ಪೂನಾಕ್ಕೆ ಹೊರಟಿದ್ದಾರೆ ಎಂದು ಹೇಳುತ್ತಿದ್ದಾರೆ. ನಿಮ್ಮ ನಾಯಕತ್ವದ ಮೇಲೆ ನಂಬಿಕೆ ಇಲ್ಲದವರು ಬಂಡಾಯ ಸಾರಿದ್ದಾರೆ. ನಿಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಗೂಬೆ ಕೂರಿಸುವ ಯತ್ನ ಸರಿಯಲ್ಲ ಎಂದರು.

ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಬಿಜೆಪಿಯಿಂದ ನಡೆದಿಲ್ಲ.ಯಾವುದೇ ಶಾಸಕರನ್ನು ಸೆಳೆಯುವಂತಹ ಪ್ರಯತ್ನ ನಾವು ಮಾಡಿಲ್ಲ. ಸರ್ಕಾರದಲ್ಲಿ ಉಂಟಾಗಿರುವ ಅಸಮಾಧಾನಕ್ಕೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಸಕ ರೇಣುಕಾಚಾರ್ಯ ಮಾತನಾಡಿ, ಮುಖ್ಯಮಂತ್ರಿಗಳ ಭಯೋತ್ಪಾದಕರಂತೆ ಮಾತನಾಡುತ್ತಾರೆ. ಯಾವುದೇ ಒಂದು ರಾಷ್ಟ್ರದ ಮೇಲೆ ದಾಳಿ ಮಾಡುವಂತೆ ಆ ಸಂಘಟನೆಯ ಮುಖ್ಯಸ್ಥ ಕರೆ ಕೊಡುತ್ತಾನೆ. ಅದೇ ರೀತಿ ಕುಮಾರಸ್ವಾಮಿ ಧಂಗೆ ಏಳುವಂತೆ ಕರೆ ಕೊಟ್ಟಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ರಾಜ್ಯದಲ್ಲಿ ಜನತೆಯಲ್ಲಿ ನೀವು ತಕ್ಷಣವೇ ಕ್ಷಮೆ ಕೇಳಬೇಕು. ಮುಖ್ಯಮಂತ್ರಿ ಸ್ಥಾನದಲ್ಲಿ ನಿಮ್ಮಂಥವರು ಮುಂದುವರೆದರೆ ರಾಜ್ಯಕ್ಕೆ ಅಪಾಯ. ಒಂದೇ ಒಂದು ಕ್ಷಣವೂ ಕೂಡ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ನಿಮಗಿಲ್ಲ ಎಂದು ಟೀಕಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ