ಜೆಟ್ ಏರ್ ವೇಸ್ ಎಡವಟ್ಟು; 30 ಲಕ್ಷ ಪರಿಹಾರ, 100 ಬ್ಯುಸಿನೆಸ್ ಕ್ಲಾಸ್ ವೋಚರ್ ಕೇಳಿದ ಸಂತ್ರಸ್ತ ಪ್ರಯಾಣಿಕ

ಮುಂಬೈ: ಜೆಟ್‌ ಏರ್ ವೇಸ್‌ನಲ್ಲಿ ಸಿಬ್ಬಂದಿ ಮಾಡಿದ ತಪ್ಪಿನಿಂದ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ಸೇರಿರುವ ಪ್ರಯಾಣಿಕರೊಬ್ಬರು ಪರಿಹಾರವಾಗಿ ರೂ 30 ಲಕ್ಷ ಮತ್ತು 100 ಬ್ಯುಸಿನೆಸ್ ಕ್ಲಾಸ್ ವೋಚರ್‌ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಹೌದು.. ನಿನ್ನೆ ಜೈಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರು ಕ್ಯಾಬಿನ್ ಒತ್ತಡ ನಿರ್ವಹಣೆ ವ್ಯವಸ್ಥೆ ಚಾಲನೆಯಾಗದ ಕಾರಣ ಅನಾರೋಗ್ಯಕ್ಕೆ ತುತ್ತಾಗಿದ್ದರು. ವಿಮಾನ ಟೇಕ್ ಆಫ್ ಆಗುತ್ತಿದ್ದಂತೆಯೇ ವಿಮಾನದಲ್ಲಿದ್ದ ಪ್ರಯಾಣಿಕರ ಮೂಗು ಮತ್ತು ಕಿವಿಯಲ್ಲಿ ರಕ್ತ ಸೋರಿಕೆಯಾಗಿತ್ತು. ಕೂಡಲೇ ವಿಮಾನವನ್ನು ವಾಪಸ್ ಲ್ಯಾಂಡ್ ಮಾಡಲಾಗಿತ್ತು. ಈ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ವಿಮಾನದ ಸಿಬ್ಬಂದಿಯ ಅಜಾಗರೂಕತೆಯಿಂದಾಗಿ ಈ ಘಟನೆ ನಡೆದಿದೆ ಎಂದು ಸಹ ಪ್ರಯಾಣಿಕರು ಆರೋಪಿಸಿದ್ದರು.

ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಹ ಪ್ರಯಾಣಿಕರೊಬ್ಬರು ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಥೆಯಿಂದ ಪರಿಹಾರ ಕೇಳಿದ್ದು, ತಮಗೆ 30 ಲಕ್ಷ ಪರಿಹಾ ಮತ್ತು 100 ಬ್ಯುಸಿನೆಸ್ ಕ್ಲಾಸ್ ವೋಚರ್‌ ನೀಡಬೇಕು ಎಂದು ಕೇಳಿದ್ದಾರೆ. ಇಲ್ಲವಾದಲ್ಲಿ ತಮ್ಮ ಬಳಿ ಇರುವ ವಿಡಿಯೋವನ್ನೇ ಇಟ್ಟುಕೊಂಡು ದೂರು ದಾಖಲಿಸುತ್ತೇನೆ ಎಂದು ಸಂಸ್ಥೆಗೆ ಬೆದರಿಕೆ ಹಾಕಿದ್ದಾರೆ.

‘ವಿಮಾನದಲ್ಲಿ ಗುರುವಾರ ಏನಾಯಿತು ಎಂಬ ವಿಡಿಯೊ ನನ್ನ ಬಳಿ ಇದೆ. ಅದನ್ನು ಬಹಿರಂಗಪಡಿಸುತ್ತೇನೆ. ಪ್ರಯಾಣಿಕರ ಬಗ್ಗೆ ಜೆಟ್‌ ಏರ್‌ವೇಸ್ ಕಾಳಜಿ ತೆಗೆದುಕೊಂಡಿಲ್ಲ. ಹೀಗಾಗಿ ನನಗೆ 30 ಲಕ್ಷ ಪರಿಹಾರ ಮತ್ತು ಎಕಾನಮಿ ಕ್ಲಾಸ್ ಟಿಕೆಟ್‌ಗಳಿಂದಲೇ ಬ್ಯುಸಿನೆಸ್ ಕ್ಲಾಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡುವ 100 ವೋಚರ್‌ಗಳನ್ನು ಕೊಡಬೇಕು ಎಂದು ಪ್ರಯಾಣಿಕ ಆಗ್ರಹಿಸಿದ್ದಾನೆ. ಒಂದು ವೇಳೆ ಪರಿಹಾರ ಕೊಡಲು ಜೆಟ್ ಏರ್ ವೇಸ್ ಒಪ್ಪದಿದ್ದರೆ ಕಾನೂನು ಸಮರ ನಡೆಸುವ ಬೆದರಿಕೆ ಹಾಕಿದ್ದಾರೆ.

ಪ್ರಸ್ತುತ ಸಂತ್ರಸ್ತ ಪ್ರಯಾಣಿಕರಿಗೆ ಇನ್ನೂ ಐದು ದಿನ ವಿಮಾನ ಪ್ರಯಾಣ ಸಲ್ಲದು ಎಂದು ವೈದ್ಯರು ಸಲಹೆ ಮಾಡಿದ್ದಾರೆ ಎನ್ನಲಾಗಿದೆ ಅಂತೆಯೇ ಅವರಿಗೆ ಹೊಟೆಲ್‌ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದೇವೆ. ಆದರೆ ಅವರು ಪರಿಹಾರವನ್ನು ಹೆಚ್ಚಿಸಬೇಕು ಎಂದು ಕೋರುತ್ತಿದ್ದಾರೆ’ ಎಂದು ಮೂಲಗಳು ಹೇಳಿವೆ.

ಮುಂಬೈನಿಂದ ಜೈಪುರಕ್ಕೆ ಹೊರಟಿದ್ದ ಜೆಟ್‌ ಏರ್‌ವೇಸ್‌ನ ವಿಮಾನದಲ್ಲಿ ಸಿಬ್ಬಂದಿ ಮಾಡಿದ ತಪ್ಪಿನಿಂದಾಗಿ ಕ್ಯಾಬಿನ್‌ನಲ್ಲಿ ಗಾಳಿಯ ಒತ್ತಡ ಕುಸಿದು 30 ಪ್ರಯಾಣಿಕರು ಅಸ್ವಸ್ಥರಾಗಿದ್ದರು. ಕಿವಿ ಮತ್ತು ಮೂಗಿನಿಂದ ರಕ್ತ ಬಂದಿತ್ತು. 171 ಮಂದಿ ಪ್ರಯಾಣಿಕರಿದ್ದ ವಿಮಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಸಿಬ್ಬಂದಿಯನ್ನು ಕರ್ತವ್ಯದಿಂದ ಹೊರಗೆ ಇರಿಸಿರುವ ವಾಯುಯಾನ ಸಂಸ್ಥೆಯು ತನಿಖೆಗೆ ಆದೇಶಿಸಿದೆ. ವಿಮಾನ ಪ್ರಯಾಣದ ಸಂದರ್ಭ ಪ್ರಯಾಣಿಕರಿಗೆ ಗಾಯವಾದರೆ ವಾಯುಯಾನ ಸಂಸ್ಥೆಗಳು ಪರಿಹಾರ ಕಟ್ಟಿಕೊಡಬೇಕು ಎಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕನ ಈ ಬೇಡಿಕೆ ಮಹತ್ವ ಪಡೆದುಕೊಂಡಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ