ಬೆಂಗಳೂರು, ಸೆ.20-ಮೊದಲು ಪಕ್ಷದಲ್ಲಿನ ಬಂಡಾಯ, ಭಿನ್ನಮತ ಸರಿಪಡಿಸಿ ನಂತರ ಸಚಿವ ಸಂಪುಟ ವಿಸ್ತರಣೆ ಮಾಡೋಣ ಎಂದು ರಾಜ್ಯ ನಾಯಕರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಮೂಲಕ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ಬಿದ್ದಂತಾಗಿದೆ. ಸಚಿವ ಆಕಾಂಕ್ಷಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ.
ಸಚಿವ ಸಂಪಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ ಸಂಬಂಧ ನಿನ್ನೆ ನವದೆಹಲಿಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ರಾಹುಲ್ ಗಾಂಧಿ ಅವರು ಸದ್ಯಕ್ಕೆ ಸಂಪುಟ ವಿಸ್ತರಣೆ ಬೇಡ ಬಂಡಾಯ ಶಮನವಾಗಲಿ ನಂತರ ನೋಡೋಣ ಎಂದಿದ್ದಾರೆ.
ವಿಧಾನಪರಿಷತ್ ಉಪಚುನಾವಣೆಯಾದ ನಂತರ ಅಕ್ಟೋಬರ್ನಲ್ಲಿ ಸಂಪುಟ ವಿಸ್ತರಣೆ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ಚರ್ಚಿಸೋಣ. ಈಗ ಸಂಪುಟ ವಿಸ್ತರಣೆಗೆ ಕೈ ಹಾಕಿದರೆ ಜೇನುಗೂಡಿಗೆ ಕಲ್ಲು ಹೊಡೆದಂತಾಗುತ್ತದೆ ಎಂದು ಹೇಳಿದ್ದಾರೆ.
ತಿಂಗಳಾಂತ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ, ಈಶ್ವರ್ ಖಂಡ್ರೆ ಬಹುತೇಕ ಎಲ್ಲರೂ ಹೇಳಿದ್ದರು.
ಆಕಾಂಕ್ಷಿಗಳು ತಮ್ಮ ನಾಯಕರ ಮೂಲಕ ಲಾಬಿ ನಡೆಸಿದ್ದರು. ಬೆಳಗಾವಿಯ ಬಂಡಾಯ ಶಮನವಾಗುತ್ತಿದ್ದಂತೆ ಆಕಾಂಕ್ಷಿಗಳು ದೆಹಲಿಗೂ ತೆರಳಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸಂಪುಟಕ್ಕೆ ಸೇರಿಸುವಂತೆ ಆಗ್ರಹಿಸಿದ್ದರು.
ಆದರೆ ನಿನ್ನೆ ರಾಹುಲ್ ಗಾಂಧಿ ಅವರು ಸಂಪುಟ ವಿಸ್ತರಣೆಗೆ ಬ್ರೇಕ್ ಹಾಕಿರುವುದರಿಂದ ಆಕಾಂಕ್ಷಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ.