ಬೆಂಗಳೂರು, ಸೆ.20-ಕಾಂಗ್ರೆಸ್ನ ಯಾವೊಬ್ಬ ಶಾಸಕನೂ ಮಹಾರಾಷ್ಟ್ರಕ್ಕೆ ಹೋಗಿಲ್ಲ. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಇಂತಹ ವದಂತಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೆಲವು ಶಾಸಕರೊಂದಿಗೆ ಮಾತನಾಡಿದ್ದೇನೆ. ಆದರೆ ಎಲ್ಲಾ ಶಾಸಕರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಇದ್ದಾರೆ. ಕೆಲವರು ವೈಯಕ್ತಿಕ ಕೆಲಸಗಳಿಗೆ ಮತ್ತೆ ಕೆಲವರು ಕುಟುಂಬದೊಂದಿಗೆ ಬೇರೆ ಕಡೆ ಪ್ರವಾಸಕ್ಕೆ ಹೋಗಿದ್ದಾರೆ. ಆದರೆ ಯಾರು ಕೂಡ ಬಿಜೆಪಿಯೊಂದಿಗೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಒಳ್ಳೆಯ ಕೆಲಸ ಮಾಡಬಾರದು, ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶದಿಂದ ಪದೇ ಪದೇ ಇಂತಹ ವದಂತಿಗಳನ್ನು ಸೃಷ್ಟಿಸಲಾಗುತ್ತಿದೆ. ಕಳೆದ ಒಂದು ತಿಂಗಳಿಂದಳೂ ಈ ಕೆಲಸಗಳು ನಡೆಯುತ್ತಿವೆ. ದಿನಬೆಳಗಾದರೆ ವದಂತಿಗಳದ್ದೇ ಕಾರು ಬಾರು ಎಂದು ಹೇಳಿದರು.
ಬಿಜೆಪಿಯವರು ಮಿಲಿಟರಿಯವರನ್ನು ಕರೆಸಿಕೊಂಡು ಶಾಸಕರನ್ನು ಹೈಜಾಕ್ ಮಾಡಲು ಇಲ್ಲಿ ಸರ್ವಾಧಿಕಾರಿ ಆಡಳಿತ ಜಾರಿಯಲ್ಲಿಲ್ಲ. ಎಷ್ಟೇ ಆಮಿಷ ಒಡ್ಡಿದರೂ ನಮ್ಮ ಶಾಸಕರು ಪಕ್ಷ ತೊರೆಯುವುದಿಲ್ಲ. ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿಯವರ ಪ್ರಯತ್ನ ಕೈಗೂಡುವುದಿಲ್ಲ ಎಂದು ಈಶ್ವರ್ ಖಂಡ್ರೆ ಹೇಳಿದರು.
ಬಿಜೆಪಿ ಇಂತಹ ಪ್ರಯತ್ನ ಕೈಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ವನಾಶವಾಗಲಿದೆ. ರಾಜ್ಯದಲ್ಲಿ ಬುಡಸಮೇತ ಕಿತ್ತು ಹೋಗುತ್ತದೆ. ರಾಜ್ಯದ ಜನರು ಬಿಜೆಪಿಯವರ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಪಕ್ಷದಲ್ಲಿ ಅಸಮಾಧಾನ, ಭಿನ್ನಾಭಿಪ್ರಾಯ ಸಹಜ. ಆದರೆ ಅದನ್ನೇ ಭಿನ್ನಮತ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದ ಅವರು, ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯ ಬಗ್ಗೆ ಬಿಜೆಪಿ ವಕ್ತಾರ ಸಂಬ್ರೀತ್ ಪಾತ್ರ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಪ್ರದರ್ಶಿಸಿದ್ದಾರೆ. ಸ್ವಾಯತ್ತ ಸಂಸ್ಥೆಗಳಾದ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ದಾಖಲೆಗಳು ಅವರ ಬಳಿ ಹೇಗೆ ಬಂದವು ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಡಿ.ಕೆ.ಶಿವಕುಮಾರ್ ಅವರ ಮೇಲೆ ರಾಜಕೀಯ ಕಾರಣಗಳಿಗಾಗಿ ಐಟಿ ದಾಳಿ ನಡೆದಿದೆ. ಅವರು ಅದನ್ನು ಕಾನೂನಾತ್ಮಕವಾಗಿಯೇ ಎದುರಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಈಶ್ವರ್ ಖಂಡ್ರೆ ಉತ್ತರಿಸಿದರು.
ಹೆಸರುಕಾಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಬೆಂಬಲ ಬೆಲೆ ನೀಡಬೇಕು. ರಾಜ್ಯದಲ್ಲಿ 3.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಸರುಕಾಳು ಬೆಳೆಯಲಾಗುತ್ತದೆ. ಒಟ್ಟು 9 ಜಿಲ್ಲೆಗಳಲ್ಲಿ 13 ಲಕ್ಷ ಕ್ವಿಂಟಾಲ್ ಹಸರುಕಾಳು ಬೆಳೆಯಲಾಗುತ್ತದೆ. ಆದರೆ ಕೇಂದ್ರ ಸರ್ಕಾರ ಕೇವಲ 23 ಸಾವಿರ ಕ್ವಿಂಟಾಲ್ ಹೆಸರುಕಾಳು ಖರೀದಿಗೆ ಅನುಮತಿ ನೀಡಿದೆ ಎಂದು ಅವರು ಆರೋಪಿಸಿದರು.