ತುಮಕೂರು: ತಂಬಾಕು ವ್ಯಸನಿಯಾಗದಂತೆ ಯುವಪೀಳಿಗೆಗೆ ಹೆಚ್ಚು ಜಾಗೃತಿ ಮೂಡಿಸಿ ಅವರನ್ನು ಇತರೆ ಚಟುವಟಿಕೆಗಳಲ್ಲಿ ತೊಡಗಿಸಲು ಪ್ರೇರೇಪಿಸಿ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ತುಮಕೂರು ನಗರವನ್ನು ತಂಬಾಕು ಮುಕ್ತ ನಗರವನ್ನಾಗಿ ಘೋಷಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ತಂಬಾಕು ಮುಕ್ತ ನಗರ ಮಾಡುವ ಕೆಲಸ ಬಹಳ ಕಷ್ಟಕರ. ೨೦೦೩ರಲ್ಲಿ ತಂಬಾಕು ನಿಷೇಧ ಮಾಡಲು ಕಾನೂನು ತರಲಾಗಿದೆ. ತಂಬಾಕಿನಿಂದ ಕ್ಯಾನ್ಸರ್ ಬರಲಿದೆ ಎಂದು ಗೊತ್ತಿದ್ದರೂ ಸೇವಿಸುತ್ತಾರೆ. ಒತ್ತಡ ಕಡಿಮೆಗೆ ಸಿಗರೇಟು ಸೇದಿದರೆ ನಿರಾಳತೆ ಬರುತ್ತದೆ ಎಂಬ ಮೂಢನಂಬಿಕೆ ಕೆಲವರಲ್ಲಿ ಇದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಕೆಲವೊಮ್ಮೆ ತಂಬಾಕು ಸಾವನ್ನೇ ತರುತ್ತದೆ. ಆದರೂ ಇದರ ವ್ಯಸನದಿಂದ ಜನರು ಹೊರ ಬರಲು ಇಷ್ಟ ಪಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿಯೂ ಈಗ ತಂಬಾಕು ನಿಯಂತ್ರಣ ಆಂದೋಲನ ಎಲ್ಲೆಡೆ ಪ್ರಾರಂಭವಾಗಿದೆ. ಇಲ್ಲಿಯೂ ಕೂಡ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿರುವುದು ಶ್ಲಾಘನೀಯ. ಆದರೆ ಹೆಚ್ಚು ಪರಿಣಾಮಕಾರಿಯಾಗಿ ಮಾಡಿ ಎಂದರು.
ಇದೇ ವೇಳೆ ತಂಬಾಕು ಮುಕ್ತ ನಗರ ಲೋಗೋ ಹಾಗೂ ಧೂಮಪಾನ ಮುಕ್ತ ಹೋಟೆಲ್ ಬಾರ್ ಮತ್ತು ರೆಸ್ಟೋರೆಂಟ್ ಸುತ್ತೋಲೆಯನ್ನು ಬಿಡುಗಡೆ ಮಾಡಿದರು.