ದುಬೈ: ಕರ್ನಾಟಕದ ಮನೀಷ್ ಪಾಂಡೆಗೆ ಆಡುವ ಬಳಗದಲ್ಲಿ ಕಾಣಿಸಲು ಅವಕಾಶ ದೊರಕದೇ ಇರಬಹುದು. ಆದರೆ ಟೀಮ್ ಇಂಡಿಯಾಗಾಗಿ ಕೊಡುಗೆ ಸಲ್ಲಿಸಲು ತಮಗೆ ದೊರಕಿದ ಯಾವುದೇ ಅವಕಾಶವನ್ನು ಮಿಸ್ ಮಾಡುವುದಿಲ್ಲ.
ಅದು ಕೂಡಾ ಏಷ್ಯಾ ಕಪ್ನಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಪಾಂಡೆ ಗಮನ ಸೆಳೆದಿದ್ದಾರೆ.
ಹಾರ್ದಿಕ್ ಪಾಂಡ್ಯ ಗಾಯದಿಂದಾಗಿ ಮೈದಾನ ತೊರೆದಿದ್ದರು. ಈ ಹಂತದಲ್ಲಿ ಬದಲಿ ಫೀಲ್ಡರ್ ರೂಪದಲ್ಲಿ ಪಾಂಡೆ ಮೈದಾನಕ್ಕೆ ಪ್ರವೇಶಿಸಿದ್ದರು.
ಆಗಲೇ ಎರಡು ಸುಲಭ ಕ್ಯಾಚ್ಗಳನ್ನು ಕೈಚೆಲ್ಲಿದ್ದ ಭಾರತಕ್ಕೆ ಹಿನ್ನಡೆಯಾಗಿತ್ತು. ಆದರೆ ಪಾಕಿಸ್ತಾನ ನಾಯಕ ಸರ್ಫರಾಜ್ ಅಹ್ಮದ್ ಅವರ ಮಹತ್ವದ ಕ್ಯಾಚ್ ಅನ್ನು ಹಿಡಿಯುವ ಮೂಲಕ ಪಾಂಡೆ ಪಂದ್ಯದಲ್ಲಿ ತಿರುಗಿ ಬೀಳುವಂತೆ ಮಾಡಿದರು.
ಅರೆ ಕಾಲಿಕ ಸ್ಪಿನ್ನರ್ ಕೇದರ್ ಜಾಧವ್ ಎಸೆದ ಪಂದ್ಯದ 25ನೇ ಓವರ್ನಲ್ಲಿ ಸರ್ಫರಾಜ್ ಹೊಡೆದ ಚೆಂಡನ್ನು ಬೌಂಡರಿ ಗೆರೆ ಬಳಿಕ ಪಾಂಡೆ ಅದ್ಭುತವಾಗಿ ಹಿಡಿದಿದ್ದರು. ಒಟ್ಟಿನಲ್ಲಿ ಮನೀಷ್ ಪಾಂಡೆ ಮ್ಯಾಜಿಕ್ ಕ್ಯಾಚ್ನಿಂದಾಗಿ ಭಾರತ ತಿರುಗೇಟು ನೀಡುವಂತಾಗಿತ್ತು.
ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ ಪಾಂಡೆ ಈ ರೀತಿಯ ಕ್ಯಾಚ್ಗಳನ್ನು ಹಿಡಿಯುತ್ತಿರುವುದು. ಈ ಹಿಂದೆಯೂ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಇದೇ ಮೋಡಿ ಮಾಡಿದ್ದಾರೆ.