
ಬೆಂಗಳೂರು, ಸೆ.19-ರಾಜಕೀಯ ಪ್ರಭಾವವಿಲ್ಲದಂತೆ ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್ ಸದಸ್ಯರನ್ನು ಶೈಕ್ಷಣಿಕವಾಗಿ ಪರಿಣತಿ ಹೊಂದಿರುವವರನ್ನೇ ನೇಮಕ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಡಿಕೇಟ್ ಸದಸ್ಯ ಸ್ಥಾನಕ್ಕೆ ಪ್ರಾಧ್ಯಾಪಕರನ್ನೇ ನೇಮಕ ಮಾಡಲಾಗುವುದು. ಪಿಎಚ್ಡಿ ಪದವಿ ಪಡೆದ ವೃತ್ತಿಪರರನ್ನೇ ನೇಮಕ ಮಾಡಲು ಮಾರ್ಗಸೂಚಿ ರೂಪಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೊಂದಿಗೂ ಚರ್ಚೆ ನಡೆಸಲಾಗಿದೆ. ಉನ್ನತ ಶೀಕ್ಛ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಲು ಇಂತಹ ಭದ್ರಬುನಾದಿ ಹಾಕಬೇಕಿದೆ. ಅ.15ರೊಳಗೆ ಖಾಲಿ ಇರುವ ವಿವಿಗಳ ಕುಲಪತಿ ಮತ್ತು ರಿಜಿಸ್ಟ್ರಾರ್ಗಳ ನೇಮಕಾತಿ ಪೂರ್ಣಗೊಳಿಸಲಾಗುವುದು ಎಂದರು
ಮೈಸೂರು ದಸರಾ ಉತ್ಸವದ ಸಂದರ್ಭದಲ್ಲಿ ಸ್ಥಳೀಯ ವಿದ್ಯಾರ್ಥಿ ಹಾಗೂ ಕಲಾವಿದರಿಗೆ ವೇದಿಕೆ ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವಿವಿಗಳಿಗೆ ಸಂಬಂಧಪಟ್ಟ ವಾಹನಗಳನ್ನು ರಾಜಕೀಯ ನಾಯಕರು ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಈ ಬಗ್ಗೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಅಧಿಕೃತ ಕೆಲಸ ಕಾರ್ಯಗಳನ್ನು ಬಿಟ್ಟು ವಿಧಾನಸೌಧದಲ್ಲಿ ಸುತ್ತಾಡುವ ಮುಖಂಡರು, ಪ್ರಾಧ್ಯಾಪಕರು, ಕುಲಪತಿ, ರಿಜಿಸ್ಟ್ರಾರ್ಗಳ ವಿರುದ್ಧವೂ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಇದೇ ವೇಳೆ ನೀಡಿದರು.