ಬೆಂಗಳೂರು, ಸೆ.19- ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ನ ಮೂರು ಸದಸ್ಯ ಸ್ಥಾನಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ತಿರುಗೇಟು ನೀಡಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ.
ವಿಧಾನ ಪರಿಷತ್ನ ಮೂರೂ ಸ್ಥಾನಗಳನ್ನು ಗೆಲ್ಲುವ ಬಗ್ಗೆ ಗಂಭೀರ ಚಿಂತನೆ ನಡೆಸಿರುವ ಬಿಜೆಪಿ ನಾಯಕರು, ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ. ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಿ, ಸರ್ಕಾರ ರಚನೆ ಮಾಡುವುದಕ್ಕೆ ತಾತ್ಕಾಲಿಕವಾಗಿ ಹಿನ್ನಡೆಯಾಗಿದ್ದರೂ ಕಾರ್ಯತಂತ್ರವನ್ನು ಮಾತ್ರ ಬಿಜೆಪಿ ನಿಲ್ಲಿಸಿಲ್ಲ. ರಾಜ್ಯ ವಿಧಾನಸಭೆಯಲ್ಲಿ 104 ಶಾಸಕರನ್ನು ಹೊಂದಿದೆ. ಕಾಂಗ್ರೆಸ್, ಜೆಡಿಎಸ್ನ 118 ಶಾಸಕರಿದ್ದಾರೆ. 222 ಶಾಸಕರನ್ನು ಹೊಂದಿರುವ ರಾಜ್ಯ ವಿಧಾನಸಭೆಯಲ್ಲಿ ವಿಧಾನ ಪರಿಷತ್ನ ಉಪ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಹೆಚ್ಚು ಮತ ಗಳಿಸುವ ಅಭ್ಯರ್ಥಿ ಚುನಾಯಿತರಾಗುತ್ತಾರೆ. ವಿಧಾನಸಭೆಯಲ್ಲಿರುವ ಶಾಸಕರ ಸಂಖ್ಯಾಬಲದ ಮೇಲೆ ವಿಧಾನ ಪರಿಷತ್ನ ಪ್ರತಿಯೊಂದು ಸ್ಥಾನದ ಅಭ್ಯರ್ಥಿ ಗೆಲ್ಲಲು 112 ಶಾಸಕರ ಮೊದಲ ಪ್ರಾಶಸ್ತ್ಯದ ಮತ ಬೇಕಾಗಿದೆ.
ಪ್ರತಿಯೊಂದು ಸ್ಥಾನಕ್ಕೂ ಪ್ರತ್ಯೇಕ ಮತಪತ್ರ ಇರುವುದರಿಂದ ಶಾಸಕರು ಪ್ರತ್ಯೇಕವಾಗಿ ಮೂರು ಮತಗಳನ್ನು ಚಲಾಯಿಸಬೇಕಾಗುತ್ತದೆ. ಬಿಜೆಪಿ ತಮ್ಮ ಶಾಸಕರ ಜೊತೆಗೆ ಆಡಳಿತ ಪಕ್ಷದಿಂದ ಕನಿಷ್ಠ 8ರಿಂದ 10ರಷ್ಟು ಶಾಸಕರ ಬೆಂಬಲ ಪಡೆಯಲೇಬೇಕಾದ ಅನಿವಾರ್ಯತೆ ಇದೆ.
ಇದುವರೆಗೂ ಕಾಂಗ್ರೆಸ್-ಜೆಡಿಎಸ್, ಬಿಜೆಪಿ ಮೂರು ಪಕ್ಷಗಳಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ವಿಧಾನಸಭೆಯಲ್ಲಿ ಹೊಂದಿರುವ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಸಮ್ಮಿಶ್ರ ಸರ್ಕಾರದ ಅಂಗ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮೂರು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ಆದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ರಹಸ್ಯ ಮತದಾನವಾಗುವುದರಿಂದ ಅಡ್ಡ ಮತದಾನ ನಡೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಈಗಾಗಲೇ ಬಿಜೆಪಿ ಸಖ್ಯದಲ್ಲಿರುವ ಆಡಳಿತ ಪಕ್ಷದ ಶಾಸಕರ ಬೆಂಬಲವನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ಪಡೆಯಲು ಆ ಪಕ್ಷ ಉದ್ದೇಶಿಸಿದೆ. ಇದಕ್ಕಾಗಿ ಆಡಳಿತ ಪಕ್ಷದ ಶಾಸಕರಿಗೆ ಭಾರಿ ಪ್ರಮಾಣದ ಆಮಿಷವನ್ನೇ ಬಿಜೆಪಿ ಒಡ್ಡುತ್ತಿದೆ ಎನ್ನಲಾಗಿದೆ.
ವಿಧಾನ ಪರಿಷತ್ನ ಸದಸ್ಯರಾಗಿದ್ದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ವಿ.ಸೋಮಣ್ಣ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಮೂರು ಸ್ಥಾನಗಳು ತೆರವಾಗಿವೆ. ತೆರವಾಗಿರುವ ಮೂರು ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ನಡೆಸುತ್ತಿದೆ.
ವಿಧಾನಸಭೆಯ ಜಂಟಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ನ ಉಪ ಚುನಾವಣೆಯ ಚುನಾವಣಾಧಿಕಾರಿ ಎಂ.ಎಸ್. ಕುಮಾರಸ್ವಾಮಿ ಅವರು ಮೂರು ಸದಸ್ಯ ಸ್ಥಾನಗಳಿಗೂ ಪ್ರತ್ಯೇಕ ಅಧಿಸೂಚನೆ ಹೊರಡಿಸಿದ್ದಾರೆ. ವಿಧಾನ ಪರಿಷತ್ನ ಪ್ರತಿಯೊಂದು ಸದಸ್ಯ ಸ್ಥಾನಕ್ಕೂ ಪ್ರತ್ಯೇಕ ಮತಪತ್ರ ಇರುತ್ತದೆ. ಒಂದು ವೇಳೆ ಚುನಾವಣೆ ನಡೆದರೆ ಪ್ರತಿಯೊಬ್ಬ ಶಾಸಕನೂ ಮೂರು ಸ್ಥಾನಗಳಿಗೂ ಪ್ರತ್ಯೇಕವಾಗಿಯೇ ಮತ ಚಲಾಯಿಸಬೇಕಾಗಿದೆ.
ಬಿಜೆಪಿ ಮತ್ತು ಆಡಳಿತ ಪಕ್ಷಗಳ ಅಭ್ಯರ್ಥಿಗಳಿಗೆ ಆಯಾ ಪಕ್ಷದ ಶಾಸಕರುಮೊದಲ ಪ್ರಾಶಸ್ತ್ಯದ ಮತಗಳನ್ನಷ್ಟೇ ನೀಡಲು ಅವಕಾಶವಿದೆ. ಎರಡನೆ ಪ್ರಾಶಸ್ತ್ಯದ ಮತಗಳನ್ನು ನೀಡಲು ಕಣದಲ್ಲಿ ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳು ಇರುವುದಿಲ್ಲ. ಬದಲಾಗಿ ಬೇರೆ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕಾಗುತ್ತದೆ. ಹೀಗಾಗಿ ಬಹುತೇಕ ಎಲ್ಲಾ ಶಾಸಕರು ಮೊದಲ ಪ್ರಾಶಸ್ತ್ಯ ಮತಗಳನ್ನಷ್ಟೇ ಚಲಾಯಿಸುವ ಸಾಧ್ಯತೆಗಳಿವೆ.
ಒಂದು ವೇಳೆ ಅಡ್ಡಮತದಾನ ನಡೆದರೆ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಅವಕಾಶವಿದೆ. ಈ ತಂತ್ರವನ್ನು ಬಿಜೆಪಿ ಅನುಸರಿಸುತ್ತಿದ್ದು, ಆಡಳಿತ ಪಕ್ಷದ ಶಾಸಕರ ಮತವನ್ನು ಸೆಳೆಯುವ ಕಾರ್ಯತಂತ್ರ ರೂಪಿಸಿದೆ. 222 ಶಾಸಕರಿರುವ ವಿಧಾನಸಭೆಯಲ್ಲಿ ಅಕ್ಟೋಬರ್ 3ರಂದು ನಡೆಯುವ ಮತದಾನದಂದು ಎಷ್ಟು ಮಂದಿ ಶಾಸಕರು ಮತ ಚಲಾಯಿಸುತ್ತಾರೆ, ಚಲಾವಣೆಯಾದ ಮತಗಳಲ್ಲಿ ಎಷ್ಟು ಸಿಂಧುವಾಗುತ್ತವೆ ಎಂಬುದರ ಮೇಲೆ ಗೆಲುವಿನ ಅಭ್ಯರ್ಥಿಯ ಮತಗಳ ಲೆಕ್ಕಾಚಾರ ಹಾಕಲಾಗುತ್ತದೆ.
ವಿಧಾನ ಪರಿಷತ್ನ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶನಿವಾರ ಕಡೆಯ ದಿನವಾಗಿದೆ. ಅಷ್ಟರಲ್ಲಿ ಮೂರೂ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಾಗಿದೆ. ಈ ಚುನಾವಣೆ ರಹಸ್ಯ ಮತದಾನವಾಗಿರುವುದರಿಂದ ರಾಜಕೀಯ ಪಕ್ಷಗಳು ವಿಪ್ ನೀಡಿದರೂ ಉಲ್ಲಂಘಿಸಿದ ಬಗ್ಗೆ ದಾಖಲೆಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಡ್ಡಮತದಾನ ಮಾಡಿದರೂ ಶಾಸಕರು ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆಗಳು ತಾಂತ್ರಿಕವಾಗಿ ಕಡಿಮೆ ಇದೆ.
ಈ ಹಿಂದೆ ಇದೇ ರೀತಿ ಕಾಂಗ್ರೆಸ್ ಪಕ್ಷದ ಶಾಸಕರು ಅಡ್ಡಮತದಾನ ಮಾಡಿದ್ದರಿಂದ ವಿಧಾನ ಪರಿಷತ್ನ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಇಕ್ಬಾಲ್ ಅಹ್ಮದ್ ಸರಡಗಿ ಪರಾಜಿತಗೊಂಡ ನಿದರ್ಶನವಿದೆ.