ಬೆಂಗಳೂರು, ಸೆ.19- ಪ್ಲಾಸ್ಟಿಕ್ ಉತ್ಪನ್ನ ಬಳಕೆ ತಪ್ಪಿಸುವುದು ಹಾಗೂ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಎಸೆಯುವುದನ್ನು ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅ.2ರಂದು ಗಾಂಧಿ ಜಯಂತಿಯಂದು ಬಿಬಿಎಂಪಿ ಪ್ಲಾಗ್ ರನ್ ಆಯೋಜಿಸಿದೆ.
ಗೋ ನೇಟೀವ್, ಯುನೈಟೆಡ್ ವೇ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಈ ಪ್ಲಾಗ್ರನ್ನಲ್ಲಿ ಸುಮಾರು 10 ಸಾವಿರ ಮಂದಿ ಪಾಲ್ಗೊಳ್ಳಲಿದ್ದು, ಇದು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಮಹಾನಗರಗಳಲ್ಲಿ ಪ್ರತಿದಿನ ಲಕ್ಷ ಲಕ್ಷ ಟನ್ಗಳಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದು ಪರಿಸರ ಹಾಗೂ ಮನುಷ್ಯರು ಮತ್ತು ಪ್ರಾಣಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹಾಗಾಗಿ ನಗರದಲ್ಲಿ ಪ್ಲಾಸ್ಟಿಕ್ ಉತ್ಪನ್ನ ನಿಷೇಧಿಸಿದ್ದೇವೆ. ಆದರೂ ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಯಿಂದ ವಿಮುಖರಾಗಿಲ್ಲ. ಇದನ್ನು ತಪ್ಪಿಸಿ, ಜನರಲ್ಲಿ ಜಾಗೃತಿ ಮೂಡಿಸಲು ಈ ಓಟವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಅ.2ರ ಗಾಂಧಿ ಜಯಂತಿಯಂದು 10 ಸಾವಿರ ಮಂದಿ ಪ್ರಮುಖ 50 ಪ್ರದೇಶಗಳಲ್ಲಿ 3 ಕಿಲೋ ಮೀಟರ್ ಓಡಲಿದ್ದಾರೆ. ಈ ಸಂದರ್ಭದಲ್ಲಿ ನಾರಿನಿಂದ ಮಾಡಿದ ಬ್ಯಾಗ್ ಹಾಗೂ ಏಪ್ರನ್ ಹಾಕಿಕೊಂಡು ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಂಗ್ರಹಿಸಲಿದ್ದಾರೆ. ಈ ಎಲ್ಲ ಉತ್ಪನ್ನಗಳನ್ನೂ ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಕೊಡುತ್ತೇವೆ ಎಂದು ತಿಳಿಸಿದರು.
ಜನ ಕುಡಿಯುವ ನೀರಿನ ಬಾಟಲ್ಗಳು, ಕವರ್ಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದನ್ನು ಸಂಗ್ರಹಿಸಿ ನೀಡಿದಾಗ ಅರಿವು ಮೂಡುತ್ತದೆ. ಹಾಗಾಗಿ ಈ ಓಟವನ್ನು ಹಮ್ಮಿಕೊಂಡಿದ್ದೇವೆ. ಇದಕ್ಕೆ ಬಿಬಿಎಂಪಿ ಸದಸ್ಯರು ನಗರದ ಏಳು ಶಾಸಕರು ಸಾಥ್ ಕೊಟ್ಟಿದ್ದಾರೆ. ಅಲ್ಲದೆ ಏಳು ಮಂದಿ ಶಾಸಕರು ಬ್ರಾಂಡ್ ಅಂಬಾಸಿಡರ್ಗಳಾಗಿದ್ದಾರೆ ಎಂದು ಹೇಳಿದರು.
ಈ ಓಟ ಅ.2ಕ್ಕೆ ಮಾತ್ರ ಸೀಮಿತ ಅಲ್ಲ, ಜನವರಿ ಮೊದಲ ದಿನ ಹೀಗೆ ಪ್ರಮುಖ ದಿನಗಳಂದು ಈ ರೀತಿಯ ಓಟ ಹಮ್ಮಿಕೊಂಡು ಪ್ಲಾಸ್ಟಿಕ್ ಉತ್ಪನ್ನ ಬಳಸದಂತೆ ಅರಿವು ಮೂಡಿಸಲಿದ್ದೇವೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.
ಪ್ಲಾಸ್ಟಿಕ್ ಉತ್ಪನ್ನ ನಿಷೇಧದ ಕುರಿತು ಅರಿವು ಮೂಡಿಸಲು ನಗರದ 16 ಕಾಲೇಜುಗಳೊಂದಿಗೆ ನಾವು ಒಡಂಬಡಿಕೆ ಮಾಡಿಕೊಂಡಿದ್ದೇವೆ ಎಂದು ಸಂಘಸಂಸ್ಥೆಗಳ ಮುಖಂಡರಲ್ಲಿ ಒಬ್ಬರಾದ ಮುರಳಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ಪ್ರಶಾಂತ್, ರಾಮ್, ಮನೀಶ್, ಅನಿರುದ್ಧ್ ಮತ್ತಿತರರು ಪಾಲ್ಗೊಂಡಿದ್ದರು.