ಬೆಂಗಳೂರು,ಸೆ.19-ತೀವ್ರ ಅನಾರೋಗ್ಯದಿಂದ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ್ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವ ಮುನ್ಸೂಚನೆ ನೀಡಿದ್ದಾರೆ.
ಒಂದು ವೇಳೆ ಅನಂತಕುಮಾರ್ ಕಣದಿಂದ ಹಿಂದೆ ಸರಿದರೆ ಬೆಂಗಳೂರು ದಕ್ಷಿಣದಿಂದ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ನೀಡಲು ಕೇಂದ್ರ ವರಿಷ್ಠರು ಚಿಂತನೆ ನಡೆಸಿದ್ದಾರೆ.
ಈಗಾಗಲೇ ಕೇಂದ್ರ ನಾಯಕರಿಗೆ ಅನಂತಕುಮಾರ್ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಪರ್ಯಾಯ ಅಭ್ಯರ್ಥಿಯನ್ನು ನೋಡಿಕೊಳ್ಳಬೇಕೆಂದು ಕೇಂದ್ರ ನಾಯಕರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹೀಗಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಸ್ಪರ್ಧೆವೊಡ್ಡುವಂತಹ ಪ್ರಬಲ ಅಭ್ಯರ್ಥಿಯನ್ನು ಸಜ್ಜುಗೊಳಿಸುವಂತೆ ರಾಜ್ಯ ನಾಯಕರಿಗೆ ಕೇಂದ್ರ ನಾಯಕರು ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸತತವಾಗಿ 6 ಬಾರಿ ಗೆದ್ದಿರುವ ಅನಂತಕುಮಾರ್ ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾದ ಕಾರಣ ಸಕ್ರೀಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ಇಲ್ಲವೇ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿಭಾಗವಹಿಸಲು ಸಾಧ್ಯವಾಗುತ್ತಿಲ್ಲ.
ಈ ಹಿಂದೆ ಅವರು ಚಿಕಿತ್ಸೆಗೆ ಒಳಗಾಗಬೇಕಿತ್ತಾದರೂ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆ ಹಾಗೂ ಎನ್ಡಿಎ ಸರ್ಕಾರದ ವಿರುದ್ದ ಟಿಡಿಪಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಅನಂತಕುಮಾರ್ ಸಂಸದೀಯ ವ್ಯವಹಾರಗಳ ಸಚಿವರಾಗಿರುವುದರಿಂದ ಲೋಕಸಭೆಯಲ್ಲಿ ಅವರ ಪಾತ್ರ ಪ್ರಮುಖವಾಗಿರುತ್ತದೆ.
ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಚಿಕಿತ್ಸೆಯನ್ನು ಮುಂದೂಡುವಂತೆ ಸೂಚಿಸಿದ್ದರು. ಇದೀಗ ಲಂಡನ್ನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನಂತಕುಮಾರ್ 2019ರ ಲೋಕಸಭೆ ಚುನಾವಣೆಯಿಂದ ಹಿಂದೆ ಸರಿಯುವ ಬಗ್ಗೆ ತಮ್ಮ ಆಪ್ತರೊಂದಿಗೆ ಹಂಚಿಕೊಂಡಿದ್ದಾರೆ.
ಪಕ್ಷದ ವರಿಷ್ಠರ ಸೂಚನೆಯಂತೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ದಿನದಿಂದ ದಿನಕ್ಕೆ ಆರೋಗ್ಯ ಕೈ ಕೊಡುತ್ತಿರುವುದರಿಂದ ವಿಶ್ರಾಂತಿ ಅಗತ್ಯವಿದೆ. ತಾವು ಪ್ರತಿನಿಧಿಸುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸೂಕ್ತವಾದ ಅಭ್ಯರ್ಥಿಯನ್ನು ವರಿಷ್ಠರು ಕಣಕ್ಕಿಳಿಸಲಿದ್ದಾರೆ ಎಂಬ ವಿಶ್ವಾಸದಲ್ಲಿ ಅನಂತ್ಕುಮಾರ್ ಇದ್ದಾರೆ. ಆದರೆ ಕುಟುಂಬದ ಮೂಲಗಳು ಮಾತ್ರ ಇದನ್ನು ನಿರಾಕರಿಸಿದೆ.