ತ್ರಿವಳಿ ತಲಾಖ್ ಮಸೂದೆ: ಸುಗ್ರೀವಾಜ್ಞೆ ಮೂಲಕ ಜಾರಿಗೆ ಸಂಪುಟ ಸಮ್ಮತಿ

ನವದೆಹಲಿ: ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆಯನ್ನು ಸುಗ್ರೀವಾಜ್ನೆ ಮೂಲಕ ಜಾರಿಗೆ ತರಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ತ್ರಿವಳಿ ತಲಾಕ್​ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆಯದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದ್ದು, ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಸೂದೆಯನ್ನು ಸುಗ್ರೀವಾಜ್ನೆ ಮೂಲಕ ಜಾರಿಗೆ ತರಲು ಸಮ್ಮತಿ ಸೂಚಿಸಲಾಗಿದೆ.

ಈಗಾಗಲೇ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಅಂಗೀಕಾರಗೊಂಡಿದ್ದು, ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿರುವ ಅಂಶಗಳಿಗೆ ವಿರೋಧ ವ್ಯಕ್ತಪಡಿಸಿದ್ದ ವಿಪಕ್ಷಗಳು ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಕ್ಕೆ ಅವಕಾಶ ನೀಡಿರಲಿಲ್ಲ. ಇದರಿಂದಾಗಿ ತ್ರಿವಳಿ ತಲಾಕ್​ ತಿದ್ದುಪಡಿ ಮಸೂದೆ ಕಾಯ್ದೆಯಾಗಿ ಜಾರಿಗೆ ತರಲು ಸಾಧ್ಯವಾಗಿರಲಿಲ್ಲ.

ವಿಪಕ್ಷಗಳ ವಿರೋಧದ ಹಿನ್ನೆಲೆಯಲ್ಲಿ, ಮುಸ್ಲಿಂ ಮಹಿಳೆಯರ ವಿವಾಹ, ರಕ್ಷಣಾ ಮಸೂದೆಗೆ ಮೂರು ಪ್ರಮುಖ ತಿದ್ದುಪಡಿಗಳನ್ನು ಆಗಸ್ಟ್ ತಿಂಗಳಲ್ಲಿ ತಂದಿತ್ತು. ಈ ತಿದ್ದುಪಡಿ ಪ್ರಕಾರ ತ್ರಿವಳಿ ತಲಾಖ್ ನೀಡುವುದು ಜಾಮೀನು ರಹಿತವಾದ ಅಪರಾಧವಾಗಲಿದ್ದು, ತಲಾಖ್ ನೀಡುವ ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಪತ್ನಿಯ ಅಭಿಪ್ರಾಯ ಪಡೆದು ನ್ಯಾಯಾಧೀಶರು ಜಾಮೀನು ನೀಡಬಹುದು. ಮಕ್ಕಳನ್ನು ತನ್ನ ವಶಕ್ಕೆ ನೀಡುವಂತೆ ತಾಯಿ ಅರ್ಜಿ ಹಾಕಬಹುದು. ತ್ರಿವಳಿ ತಲಾಕ್ ದೂರನ್ನು ಆರೋಪಿಯ ಪತ್ನಿ ಅಥವಾ ಆಕೆಯ ರಕ್ತ ಸಂಬಂಧಿಗಳು ಮಾತ್ರ ನೀಡಬಹುದಾಗಿದೆ. ಜತೆಗೆ ಎಫ್​ಐಆರ್ ದಾಖಲಿಸಿ ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದಿಲ್ಲ ಎಂಬ ಅಂಶಗಳನ್ನು ಮಸೂದೆಯಲ್ಲಿ ಸೇರಿಸಲಾಗಿದೆ.

ಸುಗ್ರೀವಾಜ್ಞೆಗೆ 6 ತಿಂಗಳೊಳಗೆ ಸಂಸತ್ತಿನಲ್ಲಿ ಅನುಮೋದನೆ ಪಡೆಯಬೇಕು. ಹಾಗಾಗಿ ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ತ್ರಿವಳಿ ತಲಾಕ್​ ಮಸೂದೆಯನ್ನು ಮಂಡಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ