ಮಲೇಷ್ಯಾ ಆಮದು ಮರಳು ಯೋಜನೆಗೆ ಸಿಗದ ಸ್ಪಂದನೆ

ಬೆಂಗಳೂರು, ಸೆ.18- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಬಹುನಿರೀಕ್ಷಿತ ಮಲೇಷ್ಯಾ ಆಮದು ಮರಳು ಯೋಜನೆಗೆ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ. ಮಲೇಷ್ಯಾ ಮರಳು ಕೊಳ್ಳುವವರ ಕೊರತೆ ಎದುರಾಗಿದೆ. ಆಮದು ಮರಳನ್ನು ಖರೀದಿಸುವ ಉತ್ಸಾಹ ಜನರಲ್ಲಿ ವ್ಯಕ್ತವಾಗಿಲ್ಲ. ಹೀಗಾಗಿ ಮರಳು ರಾಶಿ ಬಂದರುಗಳಲ್ಲೇ ಬಾಕಿ ಉಳಿದುಕೊಂಡಿದೆ.

ಮರಳು ಕೊಳ್ಳಲು ಹಿಂದೇಟು ಹಾಕಲು ಪ್ರಮುಖ ಕಾರಣ ಅಸಮರ್ಪಕ ಪ್ಯಾಕಿಂಗ್ ವ್ಯವಸ್ಥೆ. ಪ್ಯಾಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಡೀಲರುಗಳು ಖರೀದಿಗೆ ಮುಂದಾಗುತ್ತಿಲ್ಲ. ಹೀಗಾಗಿ ಅಪಾರ ಪ್ರಮಾಣದ ಮಲೆಷ್ಯಾ ಮರಳು ಮಂಗಳೂರು ಮತ್ತು ಆಂಧ್ರದ ಕೃಷ್ಣಾ ಪಟ್ಟಣಂ ಬಂದರುಗಳಲ್ಲೇ ಉಳಿದುಕೊಂಡಿದೆ.
ಕಟ್ಟಡ ನಿರ್ಮಾಣ ಉದ್ಯಮಿಗಳೂ ಆಮದು ಮರಳು ಕೊಳ್ಳುವಲ್ಲಿ ಉತ್ಸುಕತೆ ತೋರುತ್ತಿಲ್ಲ. ಸಮರ್ಪಕ ಪ್ಯಾಕೇಜಿಂಗ್ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಇದೇ ಜನವರಿಯಲ್ಲಿ ಮಲೇಷ್ಯಾದಿಂದ ಮರಳು ಆಮದು ಮಾಡುವ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಿತ್ತು. 50 ಕೆಜಿ ಬ್ಯಾಗ್‍ಗಳಲ್ಲಿ ಅವುಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಕಾಯ್ದೆ ರೂಪಿಸಲಾಗಿತ್ತು. ಆ ಮೂಲಕ ಬೇಡಿಕೆ ಮತ್ತು ಸರಬರಾಜು ನಡುವಿನ ಅಂತರ ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿತ್ತು.

ಎಂಎಸ್‍ಐಎಲ್‍ಗೆ ಮರಳನ್ನು ಮಲೇಷ್ಯಾದಿಂದ ತಂದು, ಬ್ಯಾಗುಗಳಲ್ಲಿ ಮಾರಾಟ ಮಾಡುವ ಹೊಣೆಯನ್ನು ನೀಡಲಾಗಿತ್ತು. ಅದರಂತೆ ಜನವರಿಯಲ್ಲಿ ಸುಮಾರು 8000 ಟನ್ ಮರಳನ್ನು ಮಲೇಷ್ಯಾದಿಂದ ಆಂಧ್ರದ ಕೃಷ್ಣಾ ಪಟ್ಟಣಂ ಬಂದರಿಗೆ ತರಲಾಗಿತ್ತು. ಇನ್ನು ಮಂಗಳೂರು ಬಂದರಿಗೆ ಸುಮಾರು 1.5 ಲಕ್ಷ ಟನ್ ಮರಳು ಆಮದಾಗಿದೆ. ಆದರೆ ಯಾರೂ ಕೊಳ್ಳುವವರಿಲ್ಲದೆ, ಅಲ್ಲೇ ಉಳಿದುಕೊಂಡಿದೆ.
ಎಂಎಸ್‍ಐಎಲ್ ಇಲ್ಲಿವರೆಗೆ ಕೇವಲ 4 ಸಾವಿರ ಟನ್ ಮರಳನ್ನು ಮಾರಾಟ ಮಾಡಲು ಸಾಧ್ಯವಾಗಿದೆ. ಖಾಸಗಿ ಸಂಸ್ಥೆಗಳಿಗೆ ಬಂದರಿಗೆ ಬಂದಿರುವ ಮರುಳನ್ನು ಕೊಂಡೊಯ್ಯಲು ಇನ್ನೂ ಸಾಧ್ಯವಾಗಿಲ್ಲ.

ನಿಯಮ ತಿದ್ದುಪಡಿಗೆ ಚಿಂತನೆ:
ಬ್ಯಾಗ್ ಮೂಲಕ ಮರಳು ಮಾರಾಟ ಮಾಡುವುದು ಕಷ್ಟಸಾಧ್ಯವಾಗಿದ್ದು, ಖಾಸಗಿ ಕಂಪನಿಗಳು ಈ ನಿಟ್ಟಿನಲ್ಲಿ ನಿಯಮಕ್ಕೆ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸಣ್ಣ ಪ್ರಮಾಣದಲ್ಲಿ ಮರಳು ಸಾಗಾಟ ಮತ್ತು ಮಾರಾಟಕ್ಕೆ ಅನುವು ಮಾಡಿಕೊಡುವಂತೆ ಕೋರಿದ್ದು, ಈ ಸಂಬಂಧ ನಿಯಮ ರೂಪಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಬ್ಯಾಗ್ ರಹಿತವಾಗಿ ಮರಳು ಮಾರಾಟ ಮಾಡಿದರೆ ಕಲಬೆರಕೆಯ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಪರಾಮರ್ಶೆ ನಡೆಸುತ್ತಿದ್ದಾರೆ.
ಸದ್ಯ 50 ಕೆಜಿ ಬ್ಯಾಗ್ ಮಲೇಷ್ಯಾ ಮರಳನ್ನು 200 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಒಂದು ಟನ್ ಮರಳು ಬೆಲೆ ಸುಮಾರು 4000 ರೂ. ನಿಗದಿ ಮಾಡಲಾಗಿದೆ. ಬೇಡಿಕೆ ಇಲ್ಲದ ಕಾರಣ ಎಂಎಸ್‍ಐಎಲ್ ಮಲೇಷ್ಯಾ ಮರಳಿಗೆ ರಿಯಾಯಿತಿ ನೀಡುತ್ತಿದ್ದರೂ ಮಾರಾಟ ಹೆಚ್ಚಿಕೆಯಾಗಿಲ್ಲ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ