ಬೆಂಗಳೂರು, ಸೆ.18- ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಶಿಸ್ತುಬದ್ಧ ಸೈನಿಕರಂತಿದ್ದು, ಯಾರಿಗೂ ಅಸಮಾಧಾನ ಇಲ್ಲ, ಯಾರೂ ಕೂಡ ರಾಜೀನಾಮೆ ನೀಡುವುದಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರ ರಚನೆ ಮಾಡಬೇಕೆಂಬ ಬಿಜೆಪಿಯವರ ಹಗಲು ಕನಸು ನನಸಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನ ಎಲ್ಲಾ ಶಾಸಕರು ಶಿಸ್ತಿನ ಸಿಪಾಯಿಗಳಾಗಿದ್ದು, ಪಕ್ಷದ ನಿರ್ದೇಶನಕ್ಕೆ ಬದ್ಧರಾಗಿರುತ್ತಾರೆ. ಶಾಸಕರು ರೆಸಾರ್ಟ್ಗೆ ಹೋಗುತ್ತಾರೆ, ಪಕ್ಷ ಬಿಡುತ್ತಾರೆ ಎಂಬೆಲ್ಲಾ ಊಹಾಪೆÇೀಹಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಯಾರು ಎಲ್ಲಿಗೂ ಹೋಗುವುದಿಲ್ಲ ಎಂದರು.
ಶಾಸಕರಾದ ಎಂ.ಬಿ.ಪಾಟೀಲ್, ಭೀಮಾನಾಯಕ್, ಪರಮೇಶ್ವರ್ನಾಯಕ್ ಸೇರಿದಂತೆ ಹಲವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ತಿಳಿಸಿದರು.
ಅಗತ್ಯ ಬಿದ್ದರೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗುವುದು, ಪಕ್ಷದಲ್ಲಿ ಭಿನ್ನಮತವೂ ಇಲ್ಲ. ಸಮಸ್ಯೆಯೂ ಇಲ್ಲ ಎಂದ ಮೇಲೆ ಸಂಧಾನ ಮಾಡುವುದು, ಬಗೆಹರಿಸುವುದು ಎಲ್ಲಿಂದ ಬರುತ್ತದೆ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.
ಸರ್ಕಾರ ರಚಿಸಬೇಕೆಂಬ ಬಿಜೆಪಿಯವರ ಕನಸು ಯಾವುದೇ ಕಾರಣಕ್ಕೂ ನನಸಾಗುವುದಿಲ್ಲ. ಸಚಿವ ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಜೆಡಿಎಸ್-ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷದಲ್ಲಿ ಯಾವುದೇ ಆತಂಕವಿಲ್ಲ. ಸರ್ಕಾರವನ್ನು ಅಸ್ಥಿರಗೊಳಿಸಲು ಕಿಂಗ್ಪಿನ್ಗಳು ಯತ್ನಿಸುತ್ತಿದ್ದಾರೆ ಎಂಬುದರ ಬಗ್ಗೆ ನೀವು ಮುಖ್ಯಮಂತ್ರಿ ಅವರನ್ನೇ ಕೇಳಿ ಎಂದು ಸಿದ್ದರಾಮಯ್ಯ ಹೇಳಿದರು.
28ನೇ ದಕ್ಷಿಣ ವಲಯ ಪರಿಷತ್ ಸಭೆ: ಕೇಂದ್ರ ಗೃಹ ಸಚಿವ ರಾಜನಾಥ್ ಹೇಳಿದ್ದೇನು…?
ಬೆಂಗಳೂರು, ಸೆ.18- ಕೊಡಗು ಜಿಲ್ಲೆ ಮತ್ತು ಕೇರಳ ರಾಜ್ಯದಲ್ಲಿ ಮಳೆಯಿಂದಾಗಿ ಸಂಭವಿಸಿದ ಅನಾಹುತಗಳ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಕೇಂದ್ರದ ಗೃಹ ಸಚಿವ ರಾಜನಾಥ್ಸಿಂಗ್ ಅವರು, ಎಂಥದ್ದೇ ಪರಿಸ್ಥಿತಿ ಬಂದರೂ ನಾವೆಲ್ಲ ಒಟ್ಟಾಗಿ ಎದುರಿಸೋಣ ಎಂದು ಕರೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 28ನೇ ದಕ್ಷಿಣ ವಲಯ ಪರಿಷತ್ ಸಭೆಯ ಆರಂಭದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಅವರು, ಪ್ರಕೃತಿ ವಿಕೋಪಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಸಂಕಷ್ಟಕ್ಕೀಡಾಗಿರುವ ಜನರ ಜತೆಗಿದೆ. ಎಂಥಹದ್ದೇ ಪರಿಸ್ಥಿತಿ ಬಂದರೂ ದೇಶ ಒಗ್ಗಟ್ಟಿನಿಂದ ಎದುರಿಸಬೇಕು. ಜನರಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ಸಲಹೆ ನೀಡಿದರು.
ತಮಿಳುನಾಡು ತಕರಾರು:
ಈವರೆಗೂ ಕಾವೇರಿ ನದಿ ನೀರಿ ಹಂಚಿಕೆ ವಿಷಯವಾಗಿ ಕರ್ನಾಟಕದ ಜತೆ ಸಂಘರ್ಷಕ್ಕಿಳಿಯುತ್ತಿದ್ದ ತಮಿಳುನಾಡು ಈಗ ತೆಲಗು ಗಂಗಾ ಯೋಜನೆಯಲ್ಲಿ ತಮಿಳುನಾಡಿಗೆ ಇನ್ನಷ್ಟು ಹೆಚ್ಚುವರಿ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿದೆ.
ದಕ್ಷಿಣ ವಲಯ ಪರಿಷತ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ತಮಿಳುನಾಡಿನ ಉಪ ಮುಖ್ಯಮಂತ್ರಿ ಪನ್ವೀರ್ಸೆಲ್ವಂ ಅವರು, ತೆಲಗು ಗಂಗಾ ಯೋಜನೆಯಿಂದ ತಮಿಳುನಾಡಿನ ಚೆನ್ನೈಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. 1977ರಲ್ಲಿ ಅಂಗೀಕಾರಗೊಂಡ ಈ ಯೋಜನೆಯಿಂದ ಚೆನ್ನೈಗೆ ಸರಬರಾಜಾಗುತ್ತಿರುವ 3.7 ಬಿಲಿಯನ್ ಕ್ಯೂಬಿಕ್ ಅಡಿ ನೀರು ಸಾಲುತ್ತಿಲ್ಲ. ತಮಿಳುನಾಡಿನಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಅದಕ್ಕನುಗುಣವಾಗಿ ಕುಡಿಯುವ ನೀರಿನ ಪ್ರಮಾಣವನ್ನು ಹೆಚ್ಚಿಸಬೇಕು. ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು ಕೃಷ್ಣಾನದಿಯಿಂದ ಪೂರೈಸುತ್ತಿರುವ ನೀರಿನ ಪ್ರಮಾಣವನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದರು.
ಪುದುಚೇರಿಯ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಹಣಕಾಸು ಆಯೋಗದ ಮೂಲಕ ನೀಡುತ್ತಿರುವ ಅನುದಾನ ರಾಜ್ಯಗಳ ಅಭಿವೃದ್ಧಿಗೆ ಸಾಲುತ್ತಿಲ್ಲ. ಅನುದಾನ ಹಂಚಿಕೆಯಲ್ಲೂ ತಾರತಮ್ಯವಾಗುತ್ತಿದೆ. ಇದನ್ನು ಸರಿಪಡಿಸಿ ಎಂದು ಮನವಿ ಮಾಡಿದರು.
ಸೂಕ್ತ ಹಣಕಾಸು ನೆರವಿಲ್ಲದೆ ರಾಜ್ಯಗಳು ಆರ್ಥಿಕ ಸಂಕಷ್ಟಕ್ಕೀಡಾಗಿವೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಿ ರಾಜ್ಯಗಳಿಗೆ ಶಕ್ತಿ ತುಂಬ ಬೇಕೆಂದು ಮನವಿ ಮಾಡಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಇದಕ್ಕೆ ದ್ವನಿಗೂಡಿಸಿ ಮಾತನಾಡಿ, ಕರ್ನಾಟಕ ಸರ್ಕಾರ ಇತ್ತೀಚೆಗೆ 49 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರದಿಂದ ಆರ್ಥಿಕ ಬೆಂಬಲ ಬೇಕು. ರೈತರ ಬದುಕನ್ನು ಹಸನು ಮಾಡುವ ನಿಟ್ಟಿನಲ್ಲಿ ಸರ್ಕಾರಗಳು ಎಷ್ಟು ಹಣ ನೀಡಿದರೂ ಸಾಲುವುದಿಲ್ಲ. ಅನ್ನದಾನ ರಕ್ಷಣೆ ನಮ್ಮ ಮೊದಲ ಆದ್ಯತೆ ಆಗಬೇಕು. ಹೀಗಾಗಿ ಕರ್ನಾಟಕ ಸರ್ಕಾರದ ಸಾಲ ಮನ್ನಾ ಯೋಜನೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಆಂಧ್ರಪ್ರದೇಶದ ಹಣಕಾಸು ಸಚಿವ ವೈ.ರಾಮಕೃಷ್ಣಡು, ಕೇರಳದ ಹಣಕಾಸು ಸಚಿವ ಡಾ.ಥಾಮಸ್ ಐಸಾಕ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.