ಬೆಂಗಳೂರು, ಸೆ.18-ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ಶಾಸಕರ ಮನವೊಲಿಕೆ ಸಂಬಂಧ ಹೈಕಮಾಂಡ್ ಜತೆ ಚರ್ಚೆ ನಡೆಸಲು ಕಾಂಗ್ರೆಸ್ ನಾಯಕರು ದೆಹಲಿಯತ್ತ ಮುಖ ಮಾಡಿದ್ದರೆ, ಕಾಂಗ್ರೆಸ್ ಭಿನ್ನಮತೀಯ ನಾಯಕರು ರೆಸಾರ್ಟ್ ಪ್ರಯಾಣ ಮಾಡಲು ತಯಾರಾಗುತ್ತಿದ್ದಾರೆ.
ಬಿಜೆಪಿ ನಡೆಸಿದ ಆಪರೇಷನ್ ಕಮಲ ಕೈಗೂಡದೆ ಸರ್ಕಾರ ರಚಿಸುವ ಆಸೆಯನ್ನು ಯಡಿಯೂರಪ್ಪ ಕೈ ಬಿಡಬೇಕು ಎಂಬ ಹಂತದಲ್ಲೇ ರಮೇಶ್ ಜಾರಕಿಹೊಳಿ ಮತ್ತು ಬೆಂಬಲಿಗರು ಹಿಡಿದಿರುವ ಬಂಡಾಯದ ಬಾವುಟ ಬಿಜೆಪಿ ಪಾಳಯದಲ್ಲಿ ಹೊಸ ಭರವಸೆಗಳನ್ನು ಮೂಡಿಸಿದೆ.
ನಿನ್ನೆ ಸಿದ್ದರಾಮಯ್ಯ ಅವರ ಜತೆ ಮಾತುಕತೆ ನಡೆಸಿದ ಸಚಿವ ರಮೇಶ್ ಜಾರಕಿಹೊಳಿ, ಉತ್ತರ ಕರ್ನಾಟಕ ಭಾಗಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ, ಇದು ಕಾಂಗ್ರೆಸ್‍ನಲ್ಲಿ ನಡೆಯುವ ಮಾತಲ್ಲ. ಅದನ್ನು ಬಿಟ್ಟು ಬೇರೆ ಮಾತನಾಡಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದು, ಉಪಮುಖ್ಯಮಂತ್ರಿ ಹುದ್ದೆಗಾಗಿ ಪಟ್ಟು ಹಿಡಿದಿರುವ ರಮೇಶ್ ಜಾರಕಿಹೊಳಿ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ನಿಮಗೆ ಒಳ್ಳೆಯದಾಗಲಿ ಎಂದು ಹೇಳಿ ಹೊರ ನಡೆದಿದ್ದಾರೆ.
ಸಿದ್ದರಾಮಯ್ಯ ಅವರು ನಡೆಸಿದ ಸಂಧಾನ ವಿಫಲವಾಗುತ್ತಿದ್ದಂತೆ ಕಾಂಗ್ರೆಸ್‍ನ ಅತೃಪ್ತರ ದಂಡು ಗಟ್ಟಿಯಾಗತೊಡಗಿದೆ. ರಮೇಶ್ ಜಾರಕಿಹೊಳಿ ಬಂಡಾಯಗಾರರ ನೇತೃತ್ವ ವಹಿಸಿದ್ದು, ಇಂದು ಬೆಳಗ್ಗೆ ಬೆಂಗಳೂರಿನಲ್ಲಿರುವ ತಮ್ಮ ಸರ್ಕಾರಿ ಬಂಗಲೆಯಿಂದ ಖಾಸಗಿ ಕಾರಿನಲ್ಲಿ ಖಾಸಗಿ ಹೋಟೆಲ್‍ನತ್ತ ಪ್ರಯಾಣ ಬೆಳೆಸಿದರು.
ಅವರೊಂದಿಗೆ ಶಾಸಕರಾದ ಎಂ.ಟಿ.ಬಿ.ನಾಗರಾಜ್, ನಾಗೇಂದ್ರ, ಆನಂದ್‍ಸಿಂಗ್, ಗಣೇಶ್ ಅವರೂ ಕೂಡ ಸೇರಿಕೊಂಡಿದ್ದು, ಖಾಸಗಿ ಹೋಟೆಲ್‍ನಲ್ಲಿ ರಹಸ್ಯ ಸಭೆ ನಡೆಸಿ ಕಾಂಗ್ರೆಸ್‍ನ ಅತೃಪ್ತ ಶಾಸಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಇದು ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಗಂಡಾಂತರ ತಂದೊಡ್ಡಿದೆ.
ಉಪಮುಖ್ಯಮಂತ್ರಿ ಹುದ್ದೆಗಾಗಿ ಪಟ್ಟು ಹಿಡಿದಿರುವ ರಮೇಶ್ ಜಾರಕಿಹೊಳಿ ಅವರನ್ನು ಸಮಾಧಾನಪಡಿಸಲು ಕಾಂಗ್ರೆಸ್ ನಾಯಕರು ಹೈಕಮಾಂಡ್ ನಾಯಕರ ಮೊರೆ ಹೋಗಿದ್ದಾರೆ.
ಒಂದು ವೇಳೆ ಹೈಕಮಾಂಡ್ ಸಮ್ಮತಿಸಿದರೆ ಇನ್ನೊಂದು ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಚಿಂತನೆ ಕಾಂಗ್ರೆಸ್ ವಲಯದಲ್ಲಿದೆ.