ಬೆಂಗಳೂರು, ಸೆ.17- ಬಿಜೆಪಿಯವರಿಗೆ ತಾಕತ್ತಿದ್ದರೆ ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಕೊಡಿಸಲಿ ಎಂದು ಮಾಜಿ ಸಚಿವ ಪಿ.ಟಿ.ಪರಮೇಶ್ವರ್ ನಾಯಕ್ ಸವಾಲು ಹಾಕಿದ್ದಾರೆ.
ನಗರದಲ್ಲಿಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವೊಬ್ಬ ಕಾಂಗ್ರೆಸ್ ಶಾಸಕರೂ ಬಿಜೆಪಿಗೆ ಹೋಗುತ್ತಿಲ್ಲ. ನಾವು ಮುಂಬೈಗೂ ಹೋಗುತ್ತಿಲ್ಲ. ನಾಗೇಂದ್ರ ಸೇರಿ ಯಾವೊಬ್ಬರೂ ಹೋಗುತ್ತಿಲ್ಲ. ಯಾವುದೇ ಹೋಟೆಲ್ ಕೂಡ ಬುಕ್ ಮಾಡಿಲ್ಲ . ಇವೆಲ್ಲವೂ ಕಟ್ಟು ಕತೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ರಮೇಶ್ ಜಾರಕಿಹೊಳಿ ಸೇರಿದಂತೆ ನಾವೆಲ್ಲಾ ಒಟ್ಟಾಗಿದ್ದೇವೆ. ಸಿದ್ದರಾಮಯ್ಯ ಮತ್ತು ಹೈಕಮಾಂಡ್ ಆದೇಶದಂತೆ ಮುನ್ನಡೆಯುತ್ತೇವೆ. ನಮ್ಮಲ್ಲಿ ಯಾವ ಅಸಮಾಧಾನವೂ ಇಲ್ಲ. ಬಿಜೆಪಿ ನಾಯಕ ರೇಣುಕಾಚಾರ್ಯ ಅವರ ತಾಕತ್ತು ಏನು ಎಂಬುದು ಈ ಹಿಂದೆ ಎಲ್ಲರಿಗೂ ಗೊತ್ತಾಗಿದೆ ಎಂದು ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರ್ ತಿಳಿಸಿದರು.