ಮಹತ್ವದ ತಿರುವು ಪಡೆದುಕೊಂಡ ರಾಜ್ಯ ರಾಜಕೀಯ

ಬೆಂಗಳೂರು, ಸೆ.18- ಸಚಿವ ರಮೇಶ್ ಜಾರಕಿಹೊಳಿ ಸಂಧಾನಕ್ಕೆ ಒಪ್ಪದೇ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಈಗ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಜತೆ ಮಾತುಕತೆಗೆ ಮುಂದಾಗಿರುವುದು ಅತೃಪ್ತರನ್ನು ಮತ್ತಷ್ಟು ಕೆರಳಿಸಿದ್ದು, ರಾಜ್ಯ ರಾಜಕೀಯ ಮಹತ್ವದ ತಿರುವು ಪಡೆದುಕೊಂಡಿದೆ.
ಕಾಂಗ್ರೆಸ್‍ನಲ್ಲಿ ಭಿನ್ನಮತೀಯ ಚಟುವಟಿಕೆಗಳಿಗೆ ಬೆಳಗಾವಿ ಜಿಲ್ಲಾ ರಾಜಕಾರಣವೇ ನಾಂದಿಯಾಡಿದ್ದು, ಪಿಎಲ್‍ಡಿ ಬ್ಯಾಂಕ್ ಚುನಾವಣೆಯಿಂದ ಲಕ್ಷ್ಮೀಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಅವರ ಪ್ರತಿಷ್ಠೆ ಸಮ್ಮಿಶ್ರ ಸರ್ಕಾರದ ಬುಡವನ್ನು ಅಲ್ಲಾಡಿಸುತ್ತಿದೆ. ಸಹೋದರ ಸತೀಶ್ ಜಾರಕಿಹೊಳಿ ಅವರ ಬೆಂಬಲಕ್ಕೆ ಆಗ ಸಚಿವ ರಮೇಶ್ ಜಾರಕಿಹೊಳಿ ನಿಂತಿದ್ದರು. ಇತ್ತ ಲಕ್ಷ್ಮೀಹೆಬ್ಬಾಳ್ಕರ್ ಬೆಂಬಲಕ್ಕೆ ಸಚಿವ ಡಿ.ಕೆ.ಶಿವಕುಮಾರ್ ನಿಂತಿದ್ದರಿಂದ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಅವರ ಬಣಕ್ಕೆ ಮುಖಭಂಗವಾಯಿತು.

ಅದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಜಾರಕಿಹೊಳಿ ಸಹೋದರರು ಗುಂಪುಗಾರಿಕೆಗೆ ಚಾಲನೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರಾದರೂ ಯಶಸ್ವಿಯಾಗಿಲ್ಲ.
ನಿನ್ನೆ ಸತೀಶ್ ಜಾರಕಿಹೊಳಿ ಬೆಳಗಾವಿಯಿಂದ ಆಗಮಿಸಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವುದಾಗಿ ಹೇಳಿ ತಮ್ಮ ಪಾಡಿಗೆ ತಾವಿದ್ದರು. ರಮೇಶ್ ಜಾರಕಿಹೊಳಿ ಸಂಧಾನಕ್ಕೆ ಒಪ್ಪದೇ ಇದ್ದಾಗ ಕಾಂಗ್ರೆಸ್ ನಾಯಕರು ಸತೀಶ್ ಜಾರಕಿಹೊಳಿ ಅವರೊಂದಿಗಿನ ಮಾತುಕತೆಗೆ ಮುಂದಾಗಿದ್ದಾರೆ. ಆರಂಭದಲ್ಲಿ ಕಾಂಗ್ರೆಸ್ ನಾಯಕರ ಮಾತುಕತೆಗೆ ಒಲ್ಲದ ಸತೀಶ್ ಜಾರಕಿಹೊಳಿ ಇಂದು ಎಲ್ಲರನ್ನೂ ಭೇಟಿ ಮಾಡುತ್ತಿದ್ದಾರೆ.

ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜತೆಯೂ ಸಮಾಲೋಚನೆ ನಡೆಸಲು ಮುಂದಾಗಿರುವುದರಿಂದ ಕಾಂಗ್ರೆಸ್‍ನಲ್ಲಿ ಭಿನ್ನಮತ ತಣ್ಣಗಾಗುವ ನಿರೀಕ್ಷೆಗಳು ಗರಿಗೆದರಿವೆ.
ಈವರೆಗೂ ತಮ್ಮ ಸಹೋದರನಿಗಾಗಿ ಸಚಿವ ಸ್ಥಾನವನ್ನೂ ಮರೆತು ಕಾಂಗ್ರೆಸ್ ನಾಯಕರ ವಿರುದ್ಧ ಸಡ್ಡು ಹೊಡೆದಿದ್ದ ರಮೇಶ್ ಜಾರಕಿಹೊಳಿ ಏಕಾಏಕಿ ಗರಂ ಆಗಿದ್ದಾರೆ. ಕಾಂಗ್ರೆಸ್ ನಾಯಕರು ಸಹೋದರರ ನಡುವೆ ಹೊಡೆದಾಡುವ ನೀತಿ ಅನುಸರಿಸುತ್ತಿದ್ದಾರೆ ಎಂಬ ಆಕ್ರೋಶ ರಮೇಶ್ ಜಾರಕಿಹೊಳಿ ಅವರನ್ನು ಇನ್ನಷ್ಟು ಕೆರಳುವಂತೆ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ