ನವದೆಹಲಿ: ಹರ್ಯಾಣಾ ಗ್ಯಾಂಗ್ ರೇಪ್ ಪ್ರಕರನಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾದ ಯೋಧ ಪಂಕಜ್ ಪೊಲೀಸರಿಗೆ ಶರಣಾಗುವಂತೆ ಆತನ ಸಹೋದರಿ ಮನವಿ ಮಾಡಿದ್ದಾಳೆ.
ಮೂವರು ಆರೋಪಿಗಳಲ್ಲಿ ಕಣ್ಮರೆಯಾಗಿರುವ ಇಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಒಬ್ಬಾತನನ್ನು ಭಾನುವಾರ ಸಂಜೆ ಬಂಧಿಸಿದ್ದಾರೆ. ಪ್ರಕರಣ ಹಿನ್ನಲೆಯಲ್ಲಿ ಮಾತನಾಡಿರುವ ಆಕೆ, ಈ ಮೂಲಕ ತನ್ನ ಅಣ್ಣನಿಗೆ ಸಂದೇಶ ನೀಡುತ್ತಿದ್ದೇನೆ. ದಯಮಾಡಿ ಹೊರಗೆ ಬಾ ಮತ್ತು ಪೊಲೀಸರಿಗೆ ಶರಣಾಗು. ಈ ಎಲ್ಲ ಘಟನೆಗಳಿಂದಾಗಿ ಕುಟುಂಬ ಸಾಕಷ್ಟು ತೊಂದರೆಯನ್ನನುಭವಿಸುತ್ತಿದೆ ಎಂದು ತಿಳಿಸಿದ್ದಾಳೆ.
ಯೋಧ ಪಂಕಜ್ ಮತ್ತು ಆತನ ಇಬ್ಬರು ಸ್ನೇಹಿತರಾದ ಮನಿಶ್ ಮತ್ತು ನಿಶು ಅತ್ಯಾಚಾರ ಎಸಗಿದ್ದು, ಇವರೆಲ್ಲರೂ ಶೈಕ್ಷಣಿಕ ಸಾಧನೆಗಾಗಿ ರಾಷ್ಟ್ರಪತಿಯಿಂದ ಸನ್ಮಾನ ಸ್ವೀಕರಿಸಿದ್ದರು.
ಸೆಪ್ಟೆಂಬರ್ 12ರಂದು ಯುವತಿಯು ಕೋಚಿಂಗ್ ಕ್ಲಾಸ್ಗೆಂದು ತೆರಳುವಾಗ ಕಿಡ್ನಾಪ್ ಮಾಡಿದ್ದಾರೆ. ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಂಪು ಪಾನೀಯದಲ್ಲಿ ಮತ್ತು ಬರುವ ಮಾತ್ರೆಗಳನ್ನು ಬೆರೆಸಿ ನಂತರ ಅದನ್ನು ಯುವತಿಗೆ ಬಲವಂತವಾಗಿ ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಕಜ್, ಮನೀಶ್ ಮತ್ತು ನಿಶು ಎಂಬ ಮೂವರು ಆರೋಪಿಗಳ ಚಿತ್ರವನ್ನು ಬಿಡುಗಡೆ ಮಾಡಿದ್ದ ಪೊಲೀಸರು, ಓರ್ವ ಪ್ರಮುಖ ಆರೋಪಿಯಾದ ನಿಶು ಎಂಬಾತನನ್ನು ಬಂಧಿಸಿದ್ದರು.
ಇದಕ್ಕೂ ಮುನ್ನ ಪ್ರಕರಣಕ್ಕೆ ಸಹಕರಿಸಿದ ಆರೋಪ ಮೇಲೆ ಡಾ. ಸಂಜೀವ್ ಮತ್ತು ದೀನ ದಯಾಳ್ ಎಂಬಿಬ್ಬರನ್ನು ಬಂಧಿಸಲಾಗಿತ್ತು.