ನವದೆಹಲಿ: ಸರ್ಕಾರಿ ಸ್ವಾಮ್ಯದ ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ (ಬಿಒಬಿ)ಗಳನ್ನು ವಿಲೀನಗೊಳಿಸುವುದಾಗಿ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ಕರ್ನಾಟಕ ಮೂಲದ ವಿಜಯಾ ಬ್ಯಾಂಕ್, ಮಹಾರಾಷ್ಟ್ರದ ದೇನಾ ಬ್ಯಾಂಕ್ ಹಾಗೂ ಗುಜರಾತ್ ನಬ್ಯಾಂಕ್ ಆಫ್ ಬರೋಡಾ ಈ ಮೂರೂ ಬ್ಯಾಂಕ್ಗಳ ವಿಲೀನದ ನಂತರ ದೇಶದ ಮೂರನೇ ಅತಿ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮೂರೂ ಬ್ಯಾಂಕ್ಗಳ ಒಟ್ಟಾರೆ ವಹಿವಾಟು 14.82 ಲಕ್ಷ ಕೋಟಿ ಆಗಲಿದೆ ಎಂದು ತಿಳಿಸಿದೆ.
ಜಾಗತಿಕ ಬ್ಯಾಂಕಿಂಗ್ ಸ್ಪರ್ಧೆಯಲ್ಲಿ ಭಾರತ ಪೈಪೋಟಿ ನೀಡಬೇಕಿದ್ದರೆ ಸಾರ್ವಜನಿಕ ಬ್ಯಾಂಕ್ಗಳ ವಿಲೀನ ಅನಿವಾರ್ಯ. ಇದನ್ನು ಬಜೆಟ್ನಲ್ಲೂ ಪ್ರಸ್ತಾಪಿಸಲಾಗಿದ್ದು, ಇದರ ಭಾಗವಾಗಿ ಈ ಮೂರು ಬ್ಯಾಂಕ್ಗಳ ವಿಲೀನಕ್ಕೆ ಸಮ್ಮತಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ವಿತ್ತ ಸಚಿವ ಅರುಣ್ ಜೇಟ್ಲಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ ಮೂರು ಬ್ಯಾಂಕ್ ಗಳ ವಿಲೀನದ ನಿರ್ಧಾರ ಕೈಗೊಳ್ಳಲಾಗಿದೆ. ಸಚಿವರಾದ ಪಿಯೂಷ್ ಗೋಯಲ್ (ರೈಲ್ವೆ) ಮತ್ತು ನಿರ್ಮಲಾ ಸೀತಾರಾಮನ್ (ರಕ್ಷಣೆ) ಸಭೆಯಲ್ಲಿ ಭಾಗವಹಿಸಿದ್ದರು.