ಭೋಪಾಲ್: ಮುಂಬರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ವರ್ಷಾಂತ್ಯಕ್ಕೆ ವಿಧಾನಸಭಾ ಚುನಾವಣೆ ಎದುರಿಸುವ ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ 15 ಕಿ.ಮೀ. ರೋಡ್ ಷೋ ನಡೆಸುವ ಮೂಲಕ ಪಕ್ಷದ ಚುನಾವಣಾ ರ್ಯಾಲಿಗೆ ಚಾಲನೆ ನೀಡಿದರು. ಬಳಿಕ ಬೃಹತ್ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಜಿಎಸ್ಟಿ ತೆಗೆದು ನೂತನ ಜಿಎಸ್ಟಿ ವ್ಯವಸ್ಥೆ ಜಾರಿ ಹಾಗೂ ರೈತರ ಸಂಪೂರ್ಣ ಕೃಷಿ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ನೋಟು ಅಮಾನ್ಯೀಕರಣ. ರಫೇಲ್ ವಿಮಾನ ಖರೀದಿಗಳು ಮೋದಿ ಸರ್ಕಾರದ ದೊಡ್ಡ ಹಗರಣಗಳು. ಕಾಂಗ್ರೆಸ್ ಸರ್ಕಾರ 70 ವರ್ಷಗಳಲ್ಲಿ ಮಾಡದ ಭ್ರಷ್ಟಾಚಾರವನ್ನು ಈ ಸರ್ಕಾರ ನಾಲ್ಕು ವರ್ಷಗಳಲ್ಲಿ ಮಾಡಿದೆ ಎಂದು ಆಪಾದಿಸಿದರು.
ಇನ್ನು ಸಿಎಂ ಶಿವರಾಜ್ ಸಿಂಗ್ ವಿರುದ್ಧ ಕಿಡಿಕಾರಿದ ರಾಹುಲ್, ಶಿವರಾಜ್ ಸಿಂಗ್ ಆಡಳಿತದಲ್ಲಿ ಮಧ್ಯಪ್ರದೇಶ ಸಂಪೂರ್ಣವಾಗಿ ಹಿಂದುಳಿದಿದೆ. ರಾಜ್ಯದಲ್ಲಿ ಮಹಿಳೆಯರ ಮೇಲಿನ ಹಿಂಸಾಚಾರ, ಅತ್ಯಾಚಾರಗಳು ವ್ಯಾಪಕವಾಗಿ ನಡೆಯುತ್ತಿವೆ. ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ಇದರಿಂದಾಗಿ ಮಧ್ಯಪ್ರದೇಶ ದೇಶದಲ್ಲಿಯೇ ಭ್ರಷ್ಟಾಚಾರದಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ ಎಂದು ಗುಡುಗಿದ್ದಾರೆ.
ಭೋಪಾಲ್ ನಗರದಲ್ಲಿ ನಾಲ್ಕು ತಾಸಿಗೂ ಹೆಚ್ಚು ಕಾಲ ಬಸ್ನಲ್ಲಿ ಸಂಚರಿಸಿದ ರಾಹುಲ್, ಮಾರ್ಗ ಮಧ್ಯೆ ಸಾದರ್ ಮಂಜಿಲ್ ಬಳಿ ಬಸ್ಗೆ ನಿಲುಗಡೆ ನೀಡಿ ಸಮೋಸ ಮತ್ತು ಟೀ ಸೇವಿಸಿದರು.