ಬೆಂಗಳೂರು, ಸೆ.17-ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವವರ ಅನುಕೂಲಕ್ಕಾಗಿ ಮತ್ತೊಮ್ಮೆ ಹೊಸದಾಗಿ ಬಗರ್‍ಹುಕುಂ ಸಾಗುವಳಿ ಸಕ್ರಮೀಕರಣಕ್ಕೆ ಅರ್ಜಿ ಆಹ್ವಾನಿಸಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2005ರ ಜನವರಿ 5ರವರೆಗೆ ಸರ್ಕಾರಿ ಭೂಮಿಯಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವವರಿಗೆ ನಮೂನೆ 57ರಲ್ಲಿ ಹೊಸದಾಗಿ ಅರ್ಜಿ ಸ್ವೀಕರಿಸಲಾಗುವುದು.2019ರ ಮಾರ್ಚ್ 16ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು.ಈ ಸಂಬಂಧ ಇನ್ನೊಂದು ವಾರದಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದರು.
ಎರಡು ಹೆಕ್ಟೇರ್ ವರೆಗೂ ಜಮೀನು ಮಂಜೂರಾತಿಗೆ ಅವಕಾಶವಿದೆ.ಈ ಹಿಂದೆ ನಮೂನೆ 50ರಲ್ಲಿ 10.88 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದವು.3.74ಲಕ್ಷ ಅರ್ಜಿಗಳು ಇತ್ಯರ್ಥವಾಗಿವೆ.
ನಮೂನೆ 53ರಲ್ಲಿ 10.6 ಲಕ್ಷ ಅರ್ಜಿಗಳ ಪೈಕಿ 2.10 ಲಕ್ಷ ಅರ್ಜಿಗಳು ಇತ್ಯರ್ಥವಾಗಿದ್ದು, 1.84 ಲಕ್ಷ ಅರ್ಜಿಗಳು ಬಾಕಿ ಉಳಿದಿವೆ ಎಂದರು.
ಬಗರ್‍ಹುಕುಂ ಸಾಗುವಳಿ ಅರ್ಜಿ ಹಾಗೂ 94 ಸಿ ಅರ್ಜಿಗಳನ್ನು ಪಾರದರ್ಶಕವಾಗಿ ಇತ್ಯರ್ಥ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಸದ್ಯದಲ್ಲೇ ಬಗರ್‍ಹುಕುಂ ಸಾಗುವಳಿ ಸಮಿತಿಗಳನ್ನು ರಚಿಸಲಾಗುವುದು ಎಂದು ಹೇಳಿದರು.
ಭೂಪರಿವರ್ತನೆ ಸರಳೀಕರಣ:
ರಾಜ್ಯದ ಪಟ್ಟಣ ಹಾಗೂ ಗ್ರಾಮಾಂತರ ಯೋಜನಾ ಅಧಿನಿಯಮದ ಪ್ರಕಾರ ಸರ್ಕಾರ ಪ್ರಕಟಿಸುವ ಮಹಾಯೋಜನೆ ಉದ್ದೇಶದಂತೆ ಭೂ ಪರಿವರ್ತನೆ ಕೋರಿಕೆಗೆ ಸಲ್ಲಿಸಿದಾಗ ಜಿಲ್ಲಾಧಿಕಾರಿ ತಿರಸ್ಕರಿಸುವಂತಿಲ್ಲ ಎಂದು ಸಚಿವ ದೇಶಪಾಂಡೆ ತಿಳಿಸಿದರು.
ಒಂದು ವೇಳೆ ಡಿಸಿ ಅವರು ಅರ್ಜಿ ಸಲ್ಲಿಸಿದ ನಾಲ್ಕು ತಿಂಗಳ ಅವಧಿಯೊಳಗೆ ತೀರ್ಮಾನ ನೀಡದಿದ್ದರೆ ಪರಿಭಾವಿತ ಭೂ ಪರಿವರ್ತನೆ ಎಂದು ಭಾವಿಸಲು ಕಲಂ 95(5) ರಲ್ಲಿ ಅವಕಾಶ ವಿರುತ್ತದೆ. ಭೂಪರಿವರ್ತನೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಸಾಫ್ಟ್‍ವೇರ್ ಅಭಿವೃದ್ಧಿಪಡಿಸಲಾಗಿದ್ದು, ಒಂದು ವಾರದಲ್ಲಿ ಭೂ ಪರಿವರ್ತನೆ ಅರ್ಜಿ ಇತ್ಯರ್ಥವಾಗಲಿದೆ.
ಒಂದು ವೇಳೆ ಜಮೀನು ಮಾಲೀಕರು ಒಬ್ಬರಿಗಿಂತ ಹೆಚ್ಚಿದ್ದರೆ 11 ಇ ಸ್ಕೆಚ್ ಸಲ್ಲಿಸಬೇಕು.ಇಲ್ಲದಿದ್ದರೆ ಅರ್ಜಿ ಹಾಗೂ ಪ್ರಮಾಣಪತ್ರ ಸಲ್ಲಿಸಿದರೆ ಸಾಕು ಎಂದು ವಿವರಿಸಿದರು.
ಕೃಷಿ ಉದ್ದೇಶದ ಜಮೀನನ್ನು ಇತರೆ ಉದ್ದೇಶಕ್ಕೆ ಬಳಸಲು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.ಆ ಅರ್ಜಿ ಸಿಡಿಪಿ ಮಾಸ್ಟರ್‍ಪ್ಲ್ಯಾನ್ ಪ್ರಕಾರ ಹಾಗೂ ಸ್ಥಳೀಯ ಅಭಿವೃದ್ಧಿ ವ್ಯಾಪ್ತಿಯಲ್ಲಿ ನಿಯಮಾವಳಿ ಪ್ರಕಾರವಿದ್ದರೆ ತ್ವರಿತವಾಗಿ ಭೂ ಪರಿವರ್ತನೆಯಾಗಲಿದೆ.ಈ ಸಂಬಂಧ ಕಂದಾಯ ಇಲಾಖೆ ಸುತ್ತೋಲೆಯನ್ನು ಹೊರಡಿಸಲಿದೆ ಎಂದರು.