ಬೆಂಗಳೂರು, ಸೆ.17- ಆಕೆ ಮೂರು ತಿಂಗಳ ಗರ್ಭಿಣಿ.ಸಂಸಾರದ ನೊಗ ಹೊರಲು ನೌಕರಿ ಮಾಡುತ್ತಿದ್ದ ಆ ಮಹಿಳೆ ನಾಳೆಯಿಂದ ಕೆಲಸಕ್ಕೆ ಬರಲ್ಲ ಎಂದು ಹೇಳಿ ಹೋಗಲು ಕೊನೆ ದಿನ ಕೆಲಸಕ್ಕೆ ಬಂದಿದ್ದರು.ಆದರೆ ಆದದ್ದೇ ಬೇರೆ.ಕಚೇರಿ ಮುಂದಿನ ಮರದ ಬೃಹತ್ ಕೊಂಬೆ ತಲೆ ಮೇಲೆ ಬಿದ್ದು 40ಕ್ಕೂ ಹೆಚ್ಚು ಹೊಲಿಗೆ ಹಾಕಿಸಿಕೊಳ್ಳುವಂತಹ ಸ್ಥಿತಿಗೆ ಬಂದು ತಲುಪಿದ್ದಾರೆ.
ಇಂತಹ ಹೃದಯ ವಿದ್ರಾವಕ ಘಟನೆ ನಡೆದಿದ್ದು ನಿನ್ನೆ ಮಧ್ಯಾಹ್ನ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿರುವ ಸುದರ್ಶನ್ ಸಿಲ್ಕ್ ಕಚೇರಿ ಮುಂಭಾಗ.
ಸುದರ್ಶನ್ ಸಿಲ್ಕ್‍ನಲ್ಲಿ ನೌಕರಿ ಮಾಡುತ್ತಿದ್ದ ರವೀನಾ ಮೂರು ತಿಂಗಳ ಗರ್ಭಿಣಿ. ಹೀಗಾಗಿ ನಾಳೆಯಿಂದ ಕೆಲಸಕ್ಕೆ ಬರಲ್ಲ ಎಂದು ಹೇಳಿ ಹೋಗಲು ನಿನ್ನೆ ಕಚೇರಿಗೆ ಆಗಮಿಸಿದ್ದರು.
ನಿನ್ನೆ ಮಧ್ಯಾಹ್ನ ನಗರದಲ್ಲಿ ಮಳೆ ಸುರಿಯುತ್ತಿತ್ತು.ಎರಡು ಗಂಟೆ ಸುಮಾರಿಗೆ ಸುದರ್ಶನ್ ಸಿಲ್ಕ್‍ನ ಮೇಲ್ಭಾಗಕ್ಕೆ ಹೋಗಿ ಊಟ ಮಾಡಿಕೊಂಡು ಮೊದಲನೆ ಮಹಡಿಗೆ ಆಗಮಿಸಿ ಟಿಫನ್ ಬಾಕ್ಸ್ ಒಳಗಿಡಲು ಹೋಗುತ್ತಿದ್ದಂತೆ ಕಚೇರಿ ಮುಂದಿದ್ದ ಮರದ ಬೃಹತ್ ಕೊಂಬೆ ಮುರಿದು ಬಿತ್ತು.
ಕೊಂಬೆಯ ತುದಿ ರವೀನಾಳ ತಲೆಗೆ ಬಡಿದ ಪರಿಣಾಮ ಆಕೆ ಸ್ಥಳದಲ್ಲೇ ಕುಸಿದು ಬಿದ್ದರು.ತಕ್ಷಣ ಆಕೆಯನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿ ತಲೆಗೆ 40ಕ್ಕೂ ಹೆಚ್ಚು ಹೊಲಿಗೆ ಹಾಕಿಸಿದ ಪರಿಣಾಮ ರವೀನಾ ಪ್ರಾಣಾಪಾಯದಿಂದ ಪಾರಾಗಿದ್ದರೂ, ಮೆದುಳಿನ ಸೂಕ್ಷ್ಮ ಭಾಗಕ್ಕೆ ಭಾರೀ ಪೆಟ್ಟಾಗಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೂರ್ನಾಲ್ಕು ದಿನ ಆಸ್ಪತ್ರೆಯಲ್ಲಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಮರದ ಕೊಂಬೆ ಬಿದ್ದಾಗ ಕಚೇರಿ ಮುಂಭಾಗ ಐದಾರು ಕಾರು ಚಾಲಕರು ಇದ್ದರು.ಆದರೆ ಕೊಂಬೆ ಬೀಳುವ ಶಬ್ದ ಕೇಳಿ ಓಡಿ ಹೋದ ಪರಿಣಾಮ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾದರು.
ರವೀನಾಳ ಜತೆಗೆ ಸುದರ್ಶನ್ ಸಿಲ್ಕ್‍ನ ಕಾವಲುಗಾರ ಶಿವಣ್ಣ ಎಂಬುವರ ತಲೆಗೂ ಪೆಟ್ಟಾಗಿದ್ದು , ಅವರಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೇಯರ್ ದೌಡು: ನಿನ್ನೆ ಮಧ್ಯಾಹ್ನ ರಸ್ತೆ ಬದಿ ಮರದ ಕೊಂಬೆ ಉರುಳಿ ಇಬ್ಬರಿಗೆ ಗಂಭೀರ ಗಾಯವಾಗಿದ್ದರೂ ಯಾವೊಬ್ಬ ಬಿಬಿಎಂಪಿ ಅಧಿಕಾರಿಯು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿಲ್ಲ.
ಆದರೆ ಇಂದು ಬೆಳಗ್ಗೆ ಕೆ.ಸಿ.ಜನರಲ್ ಆಸ್ಪತ್ರೆಗೆ ದೌಡಾಯಿಸಿದ ಮೇಯರ್ ಸಂಪತ್‍ರಾಜ್ ಅವರು ರವೀನಾಳ ಆರೋಗ್ಯ ವಿಚಾರಿಸಿ ಆಕೆಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಬಿಬಿಎಂಪಿಯಿಂದಲೇ ಭರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೊಳ್ಳಾದ ಮರಗಳನ್ನು ತೆರವುಗೊಳಿಸಲು ಮುಂದಾದರೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಸಡಿಲವಾದ ಮರಗಳನ್ನು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಆದರೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಪತ್‍ರಾಜ್ ಭರವಸೆ ನೀಡಿದರು.