ಬೆಂಗಳೂರಿನಲ್ಲಿ ಹೈಕ ಭವನ ನಿರ್ಮಾಣ

ಬೆಂಗಳೂರು, ಸೆ.16- ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗುವಂತೆ ಹಾಗೂ ಕೆಎಎಸ್, ಐಎಎಸ್ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಬೆಂಗಳೂರಿನಲ್ಲಿ ಹೈದರಾಬಾದ್ ಕರ್ನಾಟಕ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ ಭರವಸೆ ನೀಡಿದ್ದಾರೆ.

ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹೈದರಾಬಾದ್ ಕರ್ನಾಟಕ ನಿವಾಸಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಘ ಆಯೋಜಿಸಿದ್ದ, ವಿಮೋಚನಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಹೈದಾರಬಾದ್ ಕರ್ನಾಟಕ ಭಾಗ ತೀರಾ ಹಿಂದುಳಿದಿದೆ. ಇಲ್ಲಿನ ಜನರು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಕೆಎಎಸ್, ಐಎಎಸ್ ಪರೀಕ್ಷೆಗಳಿಗೆ ಹಾಜರಾಗಬೇಕು. ಇಂತಹ ವಿದ್ಯಾರ್ಥಿಗಳಿಗೆ ತರಬೇತಿ ಪಡೆಯಲು ಬೆಂಗಳೂರಿನಲ್ಲಿ ಭವನ ನಿರ್ಮಾಣ ಮಾಡುವ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಂಜುಡಪ್ಪ ವರದಿ ಸೇರಿದಂತೆ ಅನೇಕರು ಹೈದಾರಬಾದ್ ಕರ್ನಾಟಕ ಭಾಗದ ಸುಧಾರಣೆ ಬಗ್ಗೆ ತಿಳಿಸಿದ್ದಾರೆ. ಆದರೆ, ಅಭಿವೃದ್ಧಿಗಾಗಿ ಅನೇಕ ಯೋಜನೆ ಮತ್ತು ಸಮಿತಿಗಳನ್ನು ರಚಿಸಿ, ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಸಮ್ಮಿಶ್ರ ಸರ್ಕಾರ ಈ ಭಾಗದ ಅಭಿವೃದ್ಧಿಗೆ ಸಂಕಲ್ಪ ತೊಟ್ಟಿದೆ ಎಂದು ಹೇಳಿದರು.

ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಕಡಿಮೆ ಫಲಿತಾಂಶ ಬರುತ್ತದೆ. ಆದರೆ ಮುಂದಿನ ಸಾಲಿನಲ್ಲಿ ಹೆಚ್ಚು ಸ್ಥಾನ ಪಡೆಯಬೇಕೆಂದು ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದ ಅವರು, ಈ ಹಿಂದಿನ ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಹೈ-ಕ ಅಭಿವೃದ್ಧಿ ಗೆ ನೀಡಿದ್ದು, ಇದರ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಹೈದ್ರಾಬಾದ್ ಕರ್ನಾಟಕ ನಿವಾಸಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸಂಗಮೇಶ್ ಬಾದವಾಡಗಿ ಮಾತನಾಡಿ, ಹೈದರಾಬಾದ್ ಭಾಗದ ಶಾಸಕರೇ, ಅಲ್ಲಿನ ಜನರ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇನ್ನೂ, ನಾವು ಎಂದೂ ಅಖಂಡತೆಯ ಕುರಿತು ಮಾತನಾಡಿಲ್ಲ. ಅಭಿವೃದ್ಧಿ ಬೇಕಾಗಿದೆ ಅಷ್ಟೇ ಎಂದರು.

ಕೆಪಿಎಸ್‍ಸಿ ಮತ್ತು ಇತರೇ ನೇಮಕಾತಿ ಪ್ರಾಧಿಕಾರಗಳ ಪ್ರಕ್ರಿಯೆಯಲ್ಲಿ ಸಾಕಷ್ಟು ಕಾನೂನು ತೊಡಕುಗಳಿವೆ. ಇದರಿಂದಾಗಿ ನಿಜವಾದ ಅರ್ಹ ಅಭ್ಯರ್ಥಿಗಳು ಮೀಸಲು ಅನ್ವಯ ಹುದ್ದೆಗಳು ದೊರಕುತ್ತಿಲ್ಲ. ಪದೋನ್ನತಿಯಲ್ಲಂತೂ ಈ ತಿದ್ದುಪಡಿಯ ಆದೇಶದಿಂದ ಸರಕಾರಿ ನೌಕರರು ಇನ್ನಷ್ಟು ತೊಂದರೆಗಳಿಗೆ ಒಳಗಾಗಿದ್ದಾರೆ ಎಂದು ಆರೋಪಿಸಿದರು.
ಸಮಾರಂಭದಲ್ಲಿ ಸಹಕಾರ ಸಚಿವ ಬಂಡಪ್ಪ ಕಾಶಂಪುರ, ಮಾಜಿ ಸಚಿವ ಪಿ.ಜಿ.ಆರ್
ಸಿಂಧ್ಯಾ, ದಲಿತ ಕವಿ ಸಿದ್ದಲಿಂಗಯ್ಯ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ