ಬೆಂಗಳೂರು,ಸೆ.16- ನಗರದಲ್ಲಿ ನಡೆಯುತ್ತಿರುವ ಮೀಟರ್ ಬಡ್ಡಿ, ರೌಡಿಗಳ ಹಾವಳಿ, ಬೆಟ್ಟಿಂಗ್, ಮಟ್ಕಾ ಹಾಗೂ ಇನ್ನಿತರ ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಬೆಂಗಳೂರು ನಗರ ಅಪರಾಧ ವಿಭಾಗದ ಹೆಚ್ಚುವರಿ ಪೆÇಲೀಸ್ ಆಯುಕ್ತರ ಹುದ್ದೆಗೆ ವರ್ಗಾವಣೆಯಾಗಿರುವ ಅಲೋಕ್ಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ರೌಡಿಗಳ ಉಪಟಳವನ್ನು ನಿಯಂತ್ರಿಸಬೇಕು. ಮೀಟರ್ ಬಡ್ಡಿ ನೀಡಿ ಜನರನ್ನು ಶೋಷಿಸುವವರನ್ನು ಮಟ್ಟ ಹಾಕುವುದು ಸೇರಿದಂತೆ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಉತ್ತರ ವಿಭಾಗದ ಐಜಿಪಿಯಾಗಿದ್ದ ಅಲೋಕ್ ಕುಮಾರ್ ಅವರನ್ನು ನಿನ್ನೆಯಷ್ಟೇ ಬೆಂಗಳೂರು ನಗರದ ಅಪರಾಧ ವಿಭಾಗದ ಹೆಚ್ಚುವರಿ ಪೆÇಲೀಸ್ ಆಯುಕ್ತ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಮೀಟರ್ ಬಡ್ಡಿ ಹಾಗೂ ಇಸ್ಪೀಟ್ ದಂಧೆಕೋರರ ಹಣವನ್ನು ಬಳಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಇತ್ತೀಚೆಗಷ್ಟೇ ಆರೋಪಿಸಿದ್ದರು.
ಅಲೋಕ್ ಕುಮಾರ್ ಅವರು ಬೆಂಗಳೂರಿನಲ್ಲಿ ಈ ಹಿಂದೆ ನಗರ ಡಿಸಿಪಿಯಾಗಿ ಜಂಟಿ ಆಯುಕ್ತರಾಗಿ( ಅಪರಾಧ), ಹೆಚ್ಚುವರಿ ಆಯುಕ್ತರಾಗಿ(ಕಾನೂನು ಮತ್ತು ಸುವ್ಯವಸ್ಥೆ) ಸೇವೆ ಸಲ್ಲಿಸಿ ಹೆಚ್ಚು ಅನುಭವ ಪಡೆದಿದ್ದಾರೆ.
ಬೆಂಗಳೂರು ನಗರದ ಭೂಗತ ಚಟುವಟಿಕೆಗಳ ನಾಡಿ ಮಿಡಿತವನ್ನು ಚೆನ್ನಾಗಿ ಅರಿತಿದ್ದಾರೆ. ನಗರದ ಅಪರಾಧ ಜಗತ್ತಿನ ಬಗ್ಗೆ ಹೆಚ್ಚಿನ ಮಾಹಿತಿವುಳ್ಳವರಾಗಿದ್ದಾರೆ. ಅಲ್ಲದೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಮನೋಭಾವದವರಾಗಿರುವುದರಿಂದ ರೌಡಿ ಹಾವಳಿ, ಮೀಟರ್ ಬಡ್ಡಿ, ಮಟ್ಕಾ ದಂಧೆಯನ್ನು ಹತ್ತಿಕ್ಕಲು ಸೂಕ್ತ ವ್ಯಕ್ತಿ ಎಂದು ಮುಖ್ಯಮಂತ್ರಿ ನಿರ್ಧರಿಸಿ ವರ್ಗಾವಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.