ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ

ಬೆಂಗಳೂರು,ಸೆ.16-ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ನಾನೇ ಕಾರಣ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನವನ್ನು ಹೊರಹಾಕಿದ್ದಾರೆ.
ಸಿದ್ದರಾಮಯ್ಯನವರ ನಿವಾಸ ಕಾವೇರಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರ ಸಭೆಯಲ್ಲಿ ಈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿದ್ದ ಸಭೆಯಲ್ಲಿ ಸಿದ್ದರಾಮಯ್ಯನವರು ತಮ್ಮ ವಿರುದ್ಧದ ಆರೋಪದ ಹಿಂದೆ ನಮ್ಮವರೇ ಇದ್ದಂತೆ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯನವರ ಅಸಮಾಧಾನವನ್ನು ಗಮನಿಸಿದ ವೇಣುಗೋಪಾಲ್ ಅವರು ಮಾಧ್ಯಮಗಳು ಸೃಷ್ಟಿ ಮಾಡಿರುವುದೇ ಹೊರತು ಈ ಬಗ್ಗೆ ಕಾಂಗ್ರೆಸ್ ಪಕ್ಷದ ಯಾರೂ ಕೂಡ ಮಾತನಾಡಿಲ್ಲ ಎಂದು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.
ನಮ್ಮ ಪಕ್ಷದವರು ನಿಮ್ಮ ಮೇಲೆ ಆರೋಪ ಹೊರಿಸುವಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದು ಸಿದ್ದರಾಮಯ್ಯನವರ ಬೇಸರವನ್ನು ನಿವಾರಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.

ಆ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯನವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿದ್ದನ್ನು ಎಂದೂ ಮರೆಯುವುದಿಲ್ಲ. ಸರ್ಕಾರ ಅಸ್ಥಿರಗೊಳಿಸುವಂತಹ ಪ್ರಯತ್ನಕ್ಕೆ ನಾನು ಬೆಂಬಲ ನೀಡುವುದಿಲ್ಲ. ಅಂತಹ ಕೆಲಸವನ್ನು ಯಾವತ್ತೂ ಮಾಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೂ ತಮ್ಮ ವಿರುದ್ದ ಇಂಥದೊಂದು ಆರೋಪ ಪಕ್ಷದೊಳಗೆ ಕೇಳಿಬರದಂತೆ ನೋಡಿಕೊಳ್ಳಬೇಕಲ್ಲವೆ ಎಂದು ಸಿದ್ದರಾಮಯ್ಯ ಮರು ಪ್ರಶ್ನೆ ಹಾಕಿದ್ದಾರೆ.

ಮಾಧ್ಯಮಗಳಲ್ಲಿ ಬಿತ್ತರವಾಗಿರುವುದನ್ನು ಕೆಲವರು ತಮ್ಮ ಗಮನಕ್ಕೂ ತಂದಿದ್ದರು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಸಭೆಯಲ್ಲಿದ್ದ ನಾಯಕರು ಪ್ರಸ್ತಾಪಿಸಿದ ವಿಷಯಗಳನ್ನು ಆಲಿಸಿದ ಸಿದ್ದರಾಮಯ್ಯನವರು, ಸಂಪುಟ ವಿಸ್ತರಣೆ ಬಗ್ಗೆ ಇನ್ನೆರಡು ದಿನ ಬಿಟ್ಟು ಚರ್ಚಿಸೋಣ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್‍ನ ಆಂತರಿಕ ಭಿನ್ನಮತ, ವಿಧಾನಪರಿಷತ್‍ಗೆ ಅಭ್ಯರ್ಥಿಗಳ ಆಯ್ಕೆ, ಅತೃಪ್ತ ಶಾಸಕರ ವಿಚಾರ, ಆಪರೇಷನ್ ಕಮಲ ಸೇರಿದಂತೆ ಬಹಳಷ್ಟು ವಿಚಾರಗಳ ಬಗ್ಗೆ ಕಾಂಗ್ರೆಸ್ ನಾಯಕರು ಗಂಭೀರ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ