ಹರಿಯಾಣ ಸಾಮೂಹಿಕ ಅತ್ಯಾಚಾರ ಪ್ರಕರಣ: ನಿಮ್ಮ ಚೆಕ್ ಬೇಡ, ನಮಗೆ ನ್ಯಾಯ ಬೇಕು ಎಂದ ಸಂತ್ರಸ್ತೆಯ ತಾಯಿ

ರೆವಾರಿ : ಸಿಬಿಎಸ್​ಇ ಟಾಪರ್ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಗೆ ಸರ್ಕಾರ 2 ಲಕ್ಷ ರೂ. ಚೆಕ್​ ನೀಡಿದ್ದು, ಸಂತ್ರಸ್ತೆಯ ತಾಯಿ ಇದನ್ನು ನಿರಾಕರಿಸಿ, ‘ನಮಗೆ ದುಡ್ಡು ಬೇಡ, ನ್ಯಾಯ ಬೇಕು’ ಎಂದು ಒತ್ತಾಯಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂತ್ರಸ್ತೆಯ ತಾಯಿ, ನನ್ನ ಮಗಳ ಮೇಲೆ ಸಾಮೂಹಿಕ ಅತ್ಯಾಚಾರವಾದ ನಂತರ ನನ್ನ ಪತಿಗೆ 2 ಲಕ್ಷ ರೂ. ಚೆಕ್​ ನೀಡಿದ್ದಾರೆ. ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವುದಕ್ಕೂ ಮುಂಚೆ ಈ ಚೆಕ್​ನ್ನು ನಮಗೆ ನೀಡಿದ್ದರು. ನನ್ನ ಮಗಳು ಈಗಾಗಲೇ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಅವಳಿಗೆ ನ್ಯಾಯ ಒದಗಿಸುವುದರ ಬದಲಿಗೆ ದುಡ್ಡು ನೀಡಿದ್ದಾರೆ. ನಮಗೆ ನಿಮ್ಮ ಚೆಕ್​ ಬೇಡ. ನಮಗೆ ನ್ಯಾಯ ಬೇಕು. ಈ ಚೆಕ್​ನ್ನು ನಾವು ವಾಪಸ್​ ನೀಡುತ್ತಿದ್ದೇವೆ ಎಂದಿದ್ದಾರೆ. ​

ಸಂತ್ರಸ್ತೆಗೆ ನೀಡಿರುವ ಚೆಕ್​ ಮೇಲೆ ಮುಖ್ಯ ನ್ಯಾಯಮೂರ್ತಿ ಹಾಗೂ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಕಾರ್ಯದರ್ಶಿಯ ಸಹಿ ಇರುವುದನ್ನು ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕನಿನಾ ಪೊಲೀಸರು ಪಂಕಜ್​, ಮನೀಶ್​ ಮತ್ತು ನಿಶು ಎಂಬ ಮೂವರು ಆರೋಪಿಗಳ ಚಿತ್ರವನ್ನು ಶನಿವಾರ ಬಿಡುಗಡೆ ಮಾಡಿದ್ದರು.

ಈಗಾಗಲೇ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈತ ಟ್ಯೂಬ್​ವೆಲ್​ ಮಾಲಿಕ ಎನ್ನಲಾಗಿದ್ದು, ಘಟನಾ ಸ್ಥಳವನ್ನು ಆರೋಪಿಗಳಿಗೆ ಬಾಡಿಗೆಗೆ ನೀಡಿದ್ದ ಎನ್ನಲಾಗಿದೆ.

ಆದರೆ ಭಾರತೀಯ ಸೇನೆಯ ಯೋಧ ಸೇರಿ ಪ್ರಕರಣದಲ್ಲಿ ಗುರುತಿಸಿರುವ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ತಲೆಮರೆಸಿಕೊಂಡಿರುವ ಆರೋಪಿಗಳ ಹುಡುಕಾಟದಲ್ಲಿರುವ ಪೊಲೀಸರಿಗೆ ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿಯೂ ಘೋಷಿಸಿದ್ದಾರೆ. ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಿ ತನಿಖೆ ನಡೆಸಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ