ಬೆಂಗಳೂರು, ಸೆ.15-ಸಾವಿರಾರು ಕೋಟಿ ಸಾಲ ಪಡೆದು ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ಮಲ್ಯ ಅವರು ದೇಶ ಬಿಡುವ ಮುನ್ನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿರುವ ಹಿನ್ನೆಲೆಯನ್ನು ಬಹಿರಂಗಪಡಿಸಬೇಕು ಎಂದು ಬೆಂಗಳೂರು ನಗರ ಯುವ ಕಾಂಗ್ರೆಸ್ ಘಟಕ ಒತ್ತಾಯಿಸಿದೆ.
ನಗರದ ನೆಹರೂ ಸರ್ಕಲ್ನಲ್ಲಿ ರಾಜೀವ್ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಮೊದಲು ನೀರವ್ ಮೋದಿಯವರು ದೇಶ ಬಿಡುವ ಮೊದಲು ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ವಿಜಯ್ ಮಲ್ಯ ಅವರು ಖುದ್ದಾಗಿ ತಾವೇ ವಿಷಯವನ್ನು ಬಹಿರಂಗಪಡಿಸಿದ್ದು,ಅರುಣ್ ಜೇಟ್ಲಿ ಜೊತೆ ಮಾತುಕತೆ ನಡೆಸಿದ ನಂತರ ನಾನು ಭಾರತ ಬಿಟ್ಟೆ ಎಂದು ಹೇಳಿದ್ದಾರೆ. ಇವು ಗಂಭೀರ ಪ್ರಕರಣಗಳಾಗಿದ್ದು, ಕೇಂದ್ರ ಸರ್ಕಾರ ವಂಚಕ ಉದ್ಯಮಿಗಳು ದೇಶ ಬಿಡುವ ಮುನ್ನ ಯಾರನ್ನೆಲ್ಲಾ ಭೇಟಿ ಮಾಡಿದರು, ಏನೆಲ್ಲ ಚರ್ಚೆ ಆಯಿತು ಎಂಬ ಸಮಗ್ರ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಯುವ ಕಾಂಗ್ರೆಸ್ ಉಪಾಧ್ಯಕ್ಷ ವಿಶ್ವನಾಥ್ ಆಗ್ರಹಿಸಿದರು.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಅಚ್ಛೆ ದಿನ್ ಎಂದು ಹೇಳುತ್ತಲೇ ಶ್ರೀಮಂತರ ಅಕ್ರಮಗಳಿಗೆ ನೆರವಾಗುವ ಕೇಂದ್ರ ಬಿಜೆಪಿ ಸರ್ಕಾರ ಬಡವರ ಪಾಲಿಗೆ ದುರ್ದಿನಗಳನ್ನು ತಂದೊಡ್ಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ ಮುಖಂಡರಾದ ದಕ್ಷಿಣಾಮೂರ್ತಿ, ಆನಂದ್, ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉಮೇಶ್, ಸಂಪತ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.