ಬೆಳಗಾವಿಗೆ ರಾಜ್ಯ ಸರ್ಕಾರದ ಪ್ರಮುಖ ಇಲಾಖೆಗಳನ್ನು ವರ್ಗಾವಣೆಗೆ ಚಿಂತನೆ: ಸಿಎಂ

ಬೆಳಗಾವಿ, ಸೆ.15-ಉತ್ತರ ಕರ್ನಾಟಕ ಭಾಗದ ಜನರ ಬಹು ದಿನಗಳ ನಿರೀಕ್ಷೆಯಂತೆ ಬೆಳಗಾವಿಗೆ ರಾಜ್ಯ ಸರ್ಕಾರದ ಪ್ರಮುಖ ಇಲಾಖೆಗಳನ್ನು ವರ್ಗಾವಣೆ ಮಾಡಲು ತಮ್ಮ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ಕರ್ನಾಟಕ ಕಾನೂನು ಸಂಸ್ಥೆ (ಕೆಎಲ್‍ಎಸ್)ಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಉತ್ತರ ಕರ್ನಾಟಕದ ಹೃದಯ ಮತ್ತು ಆತ್ಮದಂತಿರುವ ಬೆಳಗಾವಿಯ ಅಭಿವೃದ್ದಿಗೆ ತಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.

ಬೆಳಗಾವಿಗೆ ರಾಜ್ಯಸರ್ಕಾರ ಪ್ರಮುಖ ವಿವಿಧ ಇಲಾಖೆಗಳನ್ನು ಸ್ಥಳಾಂತರ ಮಾಡಬೇಕೆಂಬುದು ನಮ್ಮ ಇಚ್ಛೆಯಾಗಿದೆ. ಅದನ್ನು ಅನುಷ್ಠಾನ ಗೊಳಿಸಲಾಗುವುದು ಎಂದು ಅವರು ಜನರ ಕರತಾಡನದ ನಡುವೆ ಹೇಳಿದರು.

ನಮ್ಮ ಸರ್ಕಾರ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡಲು ಸಂಪೂರ್ಣ ಬದ್ಧವಾಗಿದೆ. ಪ್ರಗತಿ ದೃಷ್ಟಿಕೋನದೊಂದಿಗೆ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕವನ್ನು ಅಭಿವೃದ್ಧಿಗೊಳಿಸಲಾಗುವುದು. ಅದಕ್ಕಾಗಿ ನಾವು ಅನೇಕ ಕಾರ್ಯಕ್ರಮಗಳನ್ನೂ ಸಹ ಕಾರ್ಯಗತಗೊಳಿಸುತ್ತಿದ್ದೇವೆ ಎಂದು ಹೇಳಿದರು.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಉತ್ತರ ಕರ್ನಾಟಕ ಮಂದಿಯ ಪಾತ್ರ ಬಹುದೊಡ್ಡದು. ವಿವಿಧ ವಲಯಗಳಲ್ಲಿ ಅದರಲ್ಲೂ ಶಿಕ್ಷಣ ಕ್ಷೇತ್ರಕ್ಕೆ ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಜನ ನೀಡಿರುವ ಕೊಡುಗೆ ಅಮೂಲ್ಯ ಎಂದರು.

75 ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಕೆಎಲ್‍ಎಸ್ ಶಿಕ್ಷಣ ಸಂಸ್ಥೆಗಳು ದೇಶಕ್ಕೆ ಅನೇಕ ಖ್ಯಾತನಾಮರನ್ನು ಕೊಡುಗೆಯಾಗಿ ನೀಡಿದೆ. ಈ ಸಂದರ್ಭದಲ್ಲಿ ಈ ಶಿಕ್ಷಣ ಸಂಸ್ಥೆಯ ಸಾಧನೆ ಮತ್ತು ಸಾಮಥ್ರ್ಯವನ್ನು ನಾನು ಪ್ರಶಂಸಿಸುತ್ತೇನೆ ಎಂದು ಹೇಳಿದರು.
ಆದರ್ಶ ಶಿಕ್ಷಕ ಉತ್ತಮ ಸಮಾಜವನ್ನು ನಿರ್ಮಿಸಬಹುದು ಎಂಬುದಕ್ಕೆ ಸರ್ವಪಲ್ಲಿ ಡಾ.ರಾಧಾಕೃಷ್ಣ ಅವರ ಆದರ್ಶಗಳು ನಮಗೆ ಉದಾಹರಣೆಯಾಗಿವೆ. ಅವರ ತತ್ವಾದರ್ಶಗಳನ್ನು ಈ ಸಂಸ್ಥೆ ಅಳವಡಿಸಿಕೊಂಡು ಯಶಸ್ವಿಯಾಗಿರುವುದಕ್ಕೆ ಇಂದಿನ ಅಮೃತ ಮಹೋತ್ಸವವೇ ಸಾಕ್ಷಿಯಾಗಿದೆ ಮುಖ್ಯಮಂತ್ರಿಗಳು ಮೆಚ್ಚುಗೆ ಮಾತುಗಳನ್ನಾಡಿದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಭಾರತದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಸಂಸದ ಸುರೇಶ್ ಅಂಗಡಿ, ಕೆಎಲ್‍ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅನಂತ್ ಮಂಡಗಿ, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‍ಗಳ ನ್ಯಾಯಮೂರ್ತಿಗಳು, ವಿವಿಧ ಕ್ಷೇತ್ರದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ