ಬೆಂಗಳೂರು, ಸೆ.15- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಆಪರೇಷನ್ ಕಮಲದ ಬಗ್ಗೆ ಹಾದಿಬೀದಿ ರಂಪಾಟವಾಗುತ್ತಿದ್ದರೂ ಇದರ ಸೂತ್ರಧಾರ ಮಾತ್ರ ಈವರೆಗೂ ಯಾರಿಗೂ ಕಾಣಿಸಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದೇ 19ರಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶೇಷ ಶಾಸಕಾಂಗ ಸಭೆಯನ್ನು ಕರೆದಿದ್ದಾರೆ. ಅಂದು ಕೆಲವು ಮಹತ್ವದ ನಿರ್ಧಾರ ಹೊರಬೀಳಲಿದೆ ಎನ್ನಲಾಗುತ್ತಿದೆ.
ಆದರೆ ಆಪರೇಷನ್ ಕಮಲದ ಪ್ರಮುಖ ರೂವಾರಿ ಎಂದು ಹೇಳಲಾಗುತ್ತಿರುವ ಶಾಸಕ ಶ್ರೀರಾಮುಲು ಕಳೆದ ಒಂದು ವಾರದಿಂದ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಳ್ಳದಿರುವುದು ಹಲವು ಅನುಮಾನಗಳನ್ನು ಹುಟ್ಟಿ ಹಾಕಿದೆ.
ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಡುವೆ ಭಾರೀ ವಾಕ್ಸಮರವೇ ನಡೆಯುತ್ತಿದ್ದರೂ ಶ್ರೀರಾಮುಲು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಯಾರ್ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬುದು ಮಾತ್ರ ಯಾರಿಗೂ ತಿಳಿಯುತ್ತಿಲ್ಲ.
ಹೀಗಾಗಿ ರಾಮುಲು ಅವರ ನಡವಳಿಕೆಗಳ ಕುರಿತಂತೆ ಕಾಂಗ್ರೆಸ್-ಜೆಡಿಎಸ್ನಲ್ಲಿ ಶಂಕೆ ವ್ಯಕ್ತವಾಗಿದೆ. ಮೂಲಗಳ ಪ್ರಕಾರ ಎರಡೂ ಪಕ್ಷಗಳಲ್ಲಿರುವ ಅತೃಪ್ತ ಶಾಸಕರನ್ನು ಸೆಳೆಯುವ ಹೊಣೆಗಾರಿಕೆಯನ್ನು ಯಡಿಯೂರಪ್ಪ ಶ್ರೀರಾಮುಲು ಅವರ ಹೆಗಲಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಬೆಳಗಾವಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷೀಯ ಚುನಾವಣೆಯಿಂದ ಹೊತ್ತಿಕೊಂಡ ಜಾರಕಿಹೊಳಿ ಸಹೋದರರ ಭಿನ್ನಮತವನ್ನೇ ಲಾಭ ಮಾಡಿಕೊಳ್ಳಲು ಅಖಾಡಕ್ಕಿಳಿದ ಶ್ರೀರಾಮುಲು, ಸಚಿವ ರಮೇಶ್ ಜಾರಕಿಹೊಳಿ ಮೂಲಕ ಕಾರ್ಯಾಚರಣೆ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.
ಒಂದು ವಾರದಿಂದ ಶ್ರೀರಾಮುಲು ಮಾಧ್ಯಮಗಳಿಗೆ ಯಾವುದೇ ಬಹಿರಂತ ಹೇಳಿಕೆಯನ್ನು ನೀಡಿಲ್ಲ. ಇದರ ಜೊತೆ ಅವರ ಪರಮಾಪ್ತ ಬಳ್ಳಾರಿಯ ಗಣಿದಣಿ ಜನಾರ್ಧನ ರೆಡ್ಡಿ ಕೂಡ ಮೌನಕ್ಕೆ ಶರಣಾಗಿರುವುದು ದೋಸ್ತಿ ಪಕ್ಷಗಳಲ್ಲಿ ಸಂಕಟ ಹೆಚ್ಚುವಂತೆ ಮಾಡಿದೆ.
ಸಾಮಾನ್ಯವಾಗಿ ಯಾವುದೇ ಕಾರ್ಯಾಚರಣೆ ನಡೆಸಿದರೂ ರಾಮುಲು ಇಲ್ಲವೇ ಜನಾರ್ಧನ ರೆಡ್ಡಿ ಯಾವುದೇ ಬಹಿರಂಗ ಹೇಳಿಕೆಗಳನ್ನು ನೀಡುವುದಿಲ್ಲ.ಕಾರ್ಯಾಚರಣೆ ಮುಗಿಯುವವರೆಗೂ ತಮ್ಮ ಗುಟ್ಟು ರಟ್ಟು ಮಾಡದೆ ಗೌಪ್ಯತೆ ಕಾಪಾಡಿಕೊಳ್ಳುವುದನ್ನು ಮೊದಲಿನಿಂದಲೂ ರೂಢಿಸಿಕೊಂಡಿದ್ದಾರೆ.
ಮೂಲಗಳ ಪ್ರಕಾರ ಕಾರ್ಯಾಚರಣೆ ಉಸ್ತುವಾರಿ ವಹಿಸಿಕೊಂಡಿರುವ ಶ್ರೀರಾಮುಲು ಜಾರಕಿಹೊಳಿ ಸಹೋದರರ ಜೊತೆ ನಡೆಸಿರುವ ಮಾತುಕತೆ ಅಂತಿಮ ಹಂತಕ್ಕೆ ಬಂದಿದೆ.
ವಿದೇಶ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಜಾರಕಿಹೊಳಿ ಸಹೋದರರು ಔಪಚಾರಿಕ ಮಾತುಕತೆ ನಡೆಸಿದ ನಂತರ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಇಂದು ಸಂಜೆ ಅಥವಾ ನಾಳೆಯೊಳಗೆ ಬೆಂಗಳೂರಿಗೆ ಆಗಮಿಸಲಿರುವ ಸಿದ್ದರಾಮಯ್ಯ ಅಸಮಾಧಾನಗೊಂಡಿರುವ ಜಾರಕಿಹೊಳಿ ಸಹೋದರರ ಜೊತೆ ಮಾತುಕತೆ ನಡೆಸಿದ ಬಳಿಕವೇ ಭಿನ್ನಮತ ತಾರ್ಕಿಕ ಅಂತ್ಯ ಕಾಣಲಿದೆ ಎನ್ನಲಾಗುತ್ತಿದೆ.
ಇನ್ನೊಂದು ಮೂಲಗಳ ಪ್ರಕಾರ ಜಾರಕಿಹೊಳಿ ಸಹೋದರರು ಬಿಜೆಪಿಗೆ ಕೈಕೊಟ್ಟರೂ, ಇವರನ್ನು ಹೊರತುಪಡಿಸಿ ಅತೃಪ್ತ ಶಾಸಕರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಹೀಗಾಗಿಯೇ ಯಡಿಯೂರಪ್ಪ ಬುಧವಾರ ವಿಶೇಷ ಶಾಸಕಾಂಗ ಸಭೆ ಕರೆದಿದ್ದು, ಅಲ್ಲಿಯ ತನಕ ಶ್ರೀರಾಮುಲು ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಳ್ಳಬಾರದು ಎಂದು ಸೂಚನೆ ನೀಡಲಾಗಿದೆ.