ನವದೆಹಲಿ: ಉದ್ಯಮಿ ವಿಜಯ್ ಮಲ್ಯ ಪರಾರಿಯಾಗಲು ಸಿಬಿಐ ನೆರವು ನೀಡಿತ್ತು. ಈ ವಿಷಯ ಪ್ರಧಾನಿ ನರೇಂದ್ರ ಮೋದಿಗೂ ಗೊತ್ತಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಟ್ವಿಟರ್ ನಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ರಾಹುಲ್ ಗಾಂಧಿ, ಮಲ್ಯ ವಿರುದ್ಧ 2015ರಲ್ಲಿ ‘ಲುಕ್ ಔಟ್’ ನೋಟಿಸ್ ಜಾರಿಯಾಗಿತ್ತು. ಇದರಿಂದ ಅವರು ದೇಶ ಬಿಟ್ಟು ಹೋಗುವುದಕ್ಕೆ ಅಡ್ಡಿಯಾಗಿತ್ತು. ಡಿಟೆನ್ಷನ್(ಬಂಧನ) ಇದ್ದದ್ದನ್ನು ‘ಇನ್ಫಾಮ್ರ್’ ನೋಟಿಸನ್ನಾಗಿ ಮಾರ್ಪಾಡು ಮಾಡಲಾಯಿತು. ಈ ವಿಷಯವನ್ನು ಪ್ರಧಾನಿಗೆ ತಿಳಿಸಲಾಗಿತ್ತು ಎಂದು ಆಪಾದಿಸಿದ್ದಾರೆ. ಕಾರಣ ಕೇಂದ್ರ ತನಿಖಾ ಸಂಸ್ಥೆ ನೇರವಾಗಿಯೇ ಅವರ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಅದು ಸಾಧ್ಯವಿದೆ ಎಂದು ಹೇಳಿದ್ದಾರೆ.
ಸುಸ್ತಿದಾರ ಮಲ್ಯಗೆ ದೇಶಬಿಟ್ಟು ತೆರಳದಂತೆ ನಿರ್ಬಂಧ ವಿಧಿಸಬೇಕು ಎಂದು ಎಸ್ಬಿಐ ನೇತೃತ್ವದಲ್ಲಿ 13 ಬ್ಯಾಂಕ್ಗಳು ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಲು ವಿಳಂಬ ಮಾಡಿದ್ದು ಏಕೆ ಎಂದೂ ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪಿಯೂಷ್ ಗೋಯೆಲ್, ಮಲ್ಯರೊಂದಿಗೆ ಸೋನಿಯಾ ಗಾಂಧಿ ಕುಟುಂಬ ಹೊಂದಿರುವ ಸಂಬಂಧ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಕಾರಣದಿಂದ ಬ್ಯಾಂಕ್ಗಳು ನಿಯಮಬಾಹಿರವಾಗಿ ಸಾಲ ಮಂಜೂರು ಮಾಡಲು ಸಾಧ್ಯವಾಯಿತು ಎಂದು ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಮಾಡಿರುವ ಆರೋಪವನ್ನು ಸಿಬಿಐ ತಳ್ಳಿಹಾಕಿದೆ. ಮಲ್ಯ ವಿಷಯದಲ್ಲಿ ಮೃದು ಧೋರಣೆ ತಳೆದಿಲ್ಲ ಎಂದು ಹೇಳಿದೆ.
ಯುಪಿಎ ಅವಧಿಯಲ್ಲಿ ಮಲ್ಯಗೆ ಬ್ಯಾಂಕ್ ಸಾಲ ಮಂಜೂರಾತಿ ವೇಳೆ ಹಣಕಾಸು ಸಚಿವಾಲಯದ ಅಧಿಕಾರಿಗಳ ಪಾತ್ರ ಕುರಿತಂತೆ ಸಿಬಿಐ ಮರುತನಿಖೆ ಕೈಗೊಂಡಿದೆ ಎನ್ನಲಾಗಿದೆ. ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡಿದೆ ಜತೆಗೆ ಕೆಲ ಅಧಿಕಾರಿಗಳ ವಿಚಾರಣೆಯನ್ನೂ ನಡೆಸಲಾಗಿದೆ. ವಿತ್ತ ಸಚಿವಾಲಯದಲ್ಲಿ ಬ್ಯಾಂಕಿಂಗ್ ವಿಭಾಗದ ಜಂಟಿ ಕಾರ್ಯದರ್ಶಿಯಾಗಿದ್ದ ಅಮಿತಾಭ್ ವರ್ಮಾ ಅವರು ವಹಿಸಿದ್ದಾರೆ ಎಂದು ಹೇಳಲಾಗಿರುವ ಪಾತ್ರದ ಬಗ್ಗೆಯೂ ಸಿಬಿಐ ತನಿಖೆ ನಡೆಸಲಿದೆ.