ಬೆಂಗಳೂರು: ಕಾಂಗ್ರೆಸ್ನಲ್ಲಿ ತಲೆದೋರಿರುವ ಆಂತರಿಕ ಭಿನ್ನಮತದ ಲಾಭಕ್ಕೆ ಬಿಜೆಪಿ ಯತ್ನಿಸುತ್ತಿದೆ. ಸಚಿವ ರಮೇಶ್ ಜಾರಕಿಹೊಳಿ ಮತ್ತು ಅವರ ಬೆಂಬಲಿಗರನ್ನು ಸೆಳೆಯುತ್ತಿದೆ ಎನ್ನುವುದು ಕೇವಲ ತೋರ್ಪಡಿಕೆ ಮಾತ್ರ. ಬಿಜೆಪಿ ಆಪರೇಷನ್ಗೆ ಮುಂದಾಗಿರುವುದೇ ಬೇರೆ ಶಾಸಕರಿಗಾಗಿ ಎನ್ನಲಾಗಿದೆ.
ಗೌರಿ-ಗಣೇಶ ಹಬ್ಬದ ಸಂಭ್ರಮವನ್ನು ಬದಿಗಿಟ್ಟು ಆಪ್ತರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸರಣಿ ಸಭೆಗಳನ್ನು ನಡೆಸಿದ್ದಾರೆ. ಮೇಲ್ನೋಟಕ್ಕೆ ಕಾಂಗ್ರೆಸ್ನಲ್ಲಿನ ಅಸಮಾಧಾನಿತ ಜಾರಕಿಜೊಳಿ ಸಹೋದರರಿಗೆ ಗಾಳ ಹಾಕಿದಂತೆ ಹೆಜ್ಜೆ ಇಟ್ಟಿರುವ ಬಿಜೆಪಿ, ತೆರೆಯ ಹಿಂದೆ ಬೇರೆಯದ್ದೇ ಗೇಮ್ ಪ್ಲಾನ್ ಮಾಡಿದೆ. ಎಲ್ಲರ ಚಿತ್ತ ಜಾರಕಿಹೊಳಿ ಸಹೋದರರ ಕಡೆ ಕೇಂದ್ರೀಕೃತವಾಗುವಂತೆ ಮಾಡಿ ತನ್ನ ಪ್ಲಾನ್ ಸಕ್ಸಸ್ ಮಾಡಿಕೊಳ್ಳಲು ಬಿಜೆಪಿ ತಂತ್ರಗಾರಿಕೆ ರೂಪಿಸಿದೆ ಎನ್ನಲಾಗಿದೆ.
ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಭಾಗದ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಗಾಳ ಹಾಕಿದೆ. ಅವರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದು, ಪಕ್ಷಕ್ಕೆ ಸೆಳೆಯುವ ಯತ್ನ ನಡೆಸಿದೆ. ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕರು ಜಾರಕಿಹೊಳಿ ಸಹೋದರರ ಮನವೊಲಿಸುವ ಕಾರ್ಯದಲ್ಲಿ ನಿರತವಾಗುವಂತೆ ನೋಡಿಕೊಂಡು ಸದ್ದಿಲ್ಲದೇ ಬೇರೆ ಕಡೆ ಆಪರೇಷನ್ ಕಮಲಕ್ಕೆ ಸ್ಕೆಚ್ ಹಾಕಲಾಗಿದೆ ಎನ್ನುವ ಮಾಹಿತಿ ಬಿಜೆಪಿ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಮಾಜಿ ಸಚಿವ ಶ್ರೀರಾಮುಲು ಹಾಗು ಜನಾರ್ದನ ರೆಡ್ಡಿ ಇದಕ್ಕೆ ಸಾಥ್ ನೀಡಿದ್ದು, ಯಡಿಯೂರಪ್ಪ ಅವರ ತಂತ್ರಗಾರಿಕೆಯಂತೆ ಶಾಸಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಸಾಕಷ್ಟು ಶಾಸಕರ ಸಂಪರ್ಕ ಸಾಧಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಹೀಗಾಗಿಯೇ ಯಡಿಯೂರಪ್ಪ ಪದೇ ಪದೆ ಆಪ್ತರೊಂದಿಗೆ ಮಾತುಕತೆ ನಡೆಸುತ್ತಿದ್ದು, ಆಪ್ತರ ಮೂಲಕ ರೆಡ್ಡಿ, ರಾಮುಲು ಅವರನ್ನು ಸಂಪರ್ಕ ಮಾಡುತ್ತಿದ್ದಾರೆ. ದೂರವಾಣಿ ಕದ್ದಾಲಿಕೆಯಂತಹ ಅನುಮಾನಗಳು ಇರುವ ಕಾರಣಕ್ಕೆ ಯಡಿಯೂರಪ್ಪ ಆಪ್ತರನ್ನು ಬಳಸಿಕೊಂಡು ರಾಮುಲು ಸಂಪರ್ಕ ಮಾಡುತ್ತಿದ್ದಾರೆ ಎನ್ನಲಾಗಿದೆ.