ಬೆಂಗಳೂರಿನಲ್ಲಿ ಕನ್ನಡಕ್ಕೆ ಆತಂಕ: ಸೆ.22ರಂದು ಹೋರಾಟ

ಬೆಂಗಳೂರು, ಸೆ.14-ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಕ್ಕೆ ಆತಂಕ ಬಂದೊದಗಿದೆ. ನ್ಯಾಯಾಲಯ, ಬ್ಯಾಂಕ್‍ಗಳಲ್ಲಿ ಕನ್ನಡ ಬಳಕೆಯಾಗುತ್ತಿಲ್ಲ. ಈ ವಿರುದ್ಧ ಇದೇ 22ರಂದು ಹೋರಾಟ ನಡೆಸಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ಉಚ್ಚ ನ್ಯಾಯಾಲಯದಿಂದ ಹಿಡಿದು ಎಲ್ಲಾ ನ್ಯಾಯಾಲಯಗಳಲ್ಲಿ ಕನ್ನಡ ಬಳಕೆಯಾಗಬೇಕು. ಆಡಳಿತ ಭಾಷೆ ಕನ್ನಡದಲ್ಲಿರಬೇಕೆಂಬ ನೀತಿ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಕರ್ನಾಟಕದ ಕಲೆ, ಸಂಸ್ಕøತಿ, ಸಾಹಿತ್ಯದ ಬೆಳವಣಿಗೆಗೆ ಭಾಷೆ ಪೂರಕ ಮತ್ತು ಪರಿಣಾಮಕಾರಿಯಾಗಿ ಬಳಕೆಯಾಗುತ್ತಿಲ್ಲ. ಕನ್ನಡದ ಏಕೀಕರಣ ಉದ್ದೇಶ ಈಡೇರಿಲ್ಲ. ಗಡಿ ನಾಡನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ ಬಗ್ಗೆ ಯಾವ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಕರ್ನಾಟಕದ ಕಾಶ್ಮೀರವಾದ ಕೊಡಗು ಭಾರೀ ಮಳೆಯಿಂದ ಕೊಚ್ಚಿ ಹೋಗಿದೆ. ಅದರ ಪುನರ್ ನಿರ್ಮಾಣದ ಬಗ್ಗೆ ಯಾವುದೇ ಯೋಜನೆಯನ್ನು ರೂಪಿಸಿಲ್ಲ. ಚಾಮರಾಜನಗರದಿಂದ ಬೀದರ್‍ವರೆಗೆ, ಮಂಗಳೂರಿನಿಂದ ಕೋಲಾರದವರೆಗೆ ಕನ್ನಡ ಸಂಪೂರ್ಣವಾಗಿ ಕಡಗಣನೆಯಾಗಿದೆ. ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಸರೋಜಿನಿ ಮಹಿಷಿ ವರದಿ, ಮಹಾಜನ್ ವರದಿ ಜಾರಿಯಾಗಲಿಲ್ಲ. ರೈಲ್ವೆ ಬೇಡಿಕೆಗಳು ಈಡೇರಲಿಲ್ಲ. ಕೇಂದ್ರ ಸರ್ಕಾರ ಕರ್ನಾಟಕವನ್ನು ಎಲ್ಲ ವಿಚಾರದಲ್ಲೂ ಸಂಪೂರ್ಣವಾಗಿ ಕಡೆಗಣಿಸಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಅವರು ಕಿಡಿಕಾರಿದರು.
ಪರಭಾಷಾ ಚಿತ್ರಗಳ ಹಾವಳಿ, ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಕ್ಕಿಲ್ಲದ ಮಾನ್ಯತೆ, ಪರಭಾಷಿಗರ ಹೆಚ್ಚಾದ ವಲಸೆ ಎಲ್ಲವನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ