ಬುದ್ದಿಮಾಂದ್ಯ ವ್ಯಾದಿಯಿಂದ ಬಳಲುತ್ತಿರುವವರನ್ನು ಆಯುಷ್ಮಾನ್ ಭಾರತ್ ಯೋಜನಾ ವ್ಯಾಪ್ತಿಗೆ ತಂದು ಚಿಕಿತ್ಸೆ

ಬೆಂಗಳೂರು, ಸೆ.14- ಬುದ್ದಿಮಾಂದ್ಯತೆಯಂತಹ ವ್ಯಾದಿಯಿಂದ ಬಳಲುತ್ತಿರುವ ರೋಗಿಗಳನ್ನು ಕೇಂದ್ರ ಸರ್ಕಾರದ ನೂತನ ಆಯುಷ್ಮಾನ್ ಭಾರತ್ ಯೋಜನಾ ವ್ಯಾಪ್ತಿಗೆ ತಂದು ಔಷಧೋಪಚಾರ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಜಗತ್‍ಪ್ರಕಾಶ್ ನಡ್ಡಾ ಇಂದಿಲ್ಲಿ ತಿಳಿಸಿದರು.
ನಗರದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಡೆಮೆನ್ಷಿಯಾ 2018 ಹಾಗೂ 22ನೇ ಆಲ್‍ಜೈಮರ್ ಮತ್ತು ಸಂಬಂಧಿತ ರೋಗಗಳ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇದೇ 25ರಿಂದ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆ ಪ್ರಾರಂಭವಾಗಲಿದೆ. ಈ ಯೋಜನಾ ವ್ಯಾಪ್ತಿಗೆ ಬುದ್ದಿ ಮಾಂದ್ಯತೆಯಿಂದ ಬಳಲುತ್ತಿರುವ ರೋಗಿಗಳನ್ನು ಸೇರ್ಪಡೆ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದರು.

ಆಯುಷ್ಮಾನ್ ಭಾರತ್ ಯೋಜನಾ ವ್ಯಾಪ್ತಿಗೆ ಇವರನ್ನು ಸೇರ್ಪಡೆ ಮಾಡಿದರೆ ಚಿಕಿತ್ಸೆಗೆ ತಗಲುವ ವೆಚ್ಚ, ಔಷಧಿಯ ವೆಚ್ಚ ಎಲ್ಲವನ್ನೂ ಕೇಂದ್ರವೇ ಭರಸಲಿದೆ. ಇಂತಹವರನ್ನು ಈ ರೋಗದಿಂದ ಮುಕ್ತಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಬುದ್ದಿ ಮಾಂದ್ಯತೆಯಿಂದ ಬಳಲುತ್ತಿರುವ ರೋಗಿಗಳನ್ನು ಯೋಜನೆ ವ್ಯಾಪ್ತಿಗೆ ತರುವ ಸಂಬಂಧ ಜಾಗತಿಕ ಕ್ರಿಯಾ ಯೋಜನೆಯೂ ಜಾರಿ ಮಾಡುತ್ತಿದೆ. ಇದರಲ್ಲಿ ವಿವಿಧ ಕ್ಷೇತ್ರಗಳ ಪರಿಣಿತರು ಅವರ ಕುಟುಂಬದ ಸಹ ಸದಸ್ಯರನ್ನು ಸೇರ್ಪಡೆ ಮಾಡಲಾಗುವುದು. ಶೀಘ್ರದಲ್ಲೇ ಕ್ರಿಯಾ ಯೋಜನೆ ಜಾರಿ ಮಾಡಲಾಗುವುದು ಎಂದು ಅವರು ಇದೇ ವೇಳೆ ಭರವಸೆ ನೀಡಿದರು.

ಯಾವ ಕಾರಣಕ್ಕಾಗಿ ಬುದ್ದಿಮಾಂದ್ಯತೆಯಿಂದ ಬಳಲುತ್ತಿದ್ದಾರೆ ? ಆ ರೋಗಿಗಳ ಮೂಲ ಸಮಸ್ಯೆ ಪತ್ತೆ ಮಾಡುವಲ್ಲಿ ಮಾನಸಿಕ ತಜ್ಞರು ಹಾಗೂ ಕುಟುಂಬ ಸದಸ್ಯರ ನೆರವು ಪಡೆಯಲಾಗುವುದು. ಕೇವಲ ಚಿಕಿತ್ಸೆಯಿಂದಲೇ ಇದು ಪರಿಹಾರವಾಗುವುದಿಲ್ಲ. ಸಮಾಜದಲ್ಲಿ ಇದರ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

2020ರ ವೇಳೆಗೆ ದೇಶದಾದ್ಯಂತ ಒಂದೂವರೆ ಲಕ್ಷ ಜನರಿಕ್ ಔಷಧಿ ಮಳಿಗೆ ತೆರೆಯುವ ಗುರಿ ಹೊಂದಿದ್ದೇವೆ. ಇದರಿಂದ ಪ್ರತಿಯೊಬ್ಬರಿಗೂ ಕಡಿಮೆ ದರದಲ್ಲಿ ಔಷಧಿಗಳನ್ನು ಸಿಗುವುದಲ್ಲದೆ, ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಹೊಂದಲು ಅನುಕೂಲವಾಗುತ್ತದೆ. ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ರೋಗ ಪತ್ತೆಹಚ್ಚುವಿಕೆ ಯಂತ್ರಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂಬ ನಿಯಮವನ್ನು ಜಾರಿ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಇದರಿಂದ ಜನರು ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಪರಿಪಾಟಿಲು ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು.
ಸಚಿವ ಶಿವಾನಂದ ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ಆಯುಷ್ಮಾನ್ ಭಾರತ್ ಯೋಜನೆಯನ್ನು ಕರ್ನಾಟಕದ ಆರೋಗ್ಯ ಯೋಜನೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ಚಿಂತನೆ ನಡೆದಿದೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.

ಆಯುಷ್ಮಾನ್ ಭಾರತ್ -ಕರ್ನಾಟಕ ಆರೋಗ್ಯ ಯೋಜನೆ ಅನುಷ್ಠಾನವಾದರೆ ಬುದ್ದಿ ಮಾಂದ್ಯತೆ ವ್ಯಾದಿಯನ್ನು ಇದರ ವ್ಯಾಪ್ತಿಗೆ ಅಳವಡಿಸಲಾಗುವುದು. ಆಯುಷ್ಮಾನ್ ಯೋಜನೆಗೆ ನಾವು ಎಲ್ಲಾ ರೀತಿಯ ಸಹಕಾರ ನೀಡಲಿದ್ದೇವೆ ಎಂದರು.
ಇಸ್ರೋದ ಮಾಜಿ ಅಧ್ಯಕ್ಷ ಪೆÇ್ರ.ಕೆ.ಕಸ್ತೂರಿರಂಗನ್, ನಿಮ್ಹಾನ್ಸ್‍ನ ನಿರ್ದೇಶಕ ಗಂಗಾಧರ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ