ನವದೆಹಲಿ: ದೇಶಭ್ರಷ್ಟ ಆರ್ಥಿಕ ಅಪರಾಧಿ ವಿಜಯ್ ಮಲ್ಯ ಅವರನ್ನು ಹಣಕಾಸು ಸಚಿವ ಅರುಣ್ ಜೇಟ್ಲಿಯವರು ರಕ್ಷಿಸಿದ್ದಾರೆ ಎಂದು ಪ್ರತಿಪಕ್ಷ ಆರೋಪಿಸುತ್ತಿರುವುದರಿಂದ ಇದೀಗ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಸಚಿವ ಸ್ಥಾನಕ್ಕಾಗಿ ಕುತ್ತುಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಮನಸ್ಸು ಮಾಡುತ್ತಿದ್ದರೆ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ವಿಜಯ್ ಮಲ್ಯ ಭಾರತ ಬಿಟ್ಟು ಹೋಗುವುದನ್ನು ತಡೆಯಬಹುದಿತ್ತು ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ ವಿಜಯ್ ಮಲ್ಯ ಅವರನ್ನು ರಕ್ಷಿಸುತ್ತಿದೆಯೇ ಎಂದು ಸಾರ್ವಜನಿಕರಲ್ಲಿ ಸಂಶಯ ಬರುವ ರೀತಿಯಲ್ಲಿ ಕಾಂಗ್ರೆಸ್ ಆರೋಪ ಮಾಡಿದೆ.
ಹಣಕಾಸು ಸಚಿವ ಅರುಣ್ ಜೇಟ್ಲಿಯವರು ತಾವು ವಿಜಯ್ ಮಲ್ಯ ಅವರನ್ನು ಭೇಟಿ ಮಾಡಿರುವ ಕುರಿತು ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಲಂಡನ್ ಗೆ ಹೋಗುವ ಮುನ್ನ ಹಣಕಾಸು ಸಚಿವ ಜೇಟ್ಲಿಯನ್ನು ವಿಜಯ್ ಮಲ್ಯ ಭೇಟಿ ಮಾಡಿದ್ದು ತನ್ನ ಸಾಲವನ್ನು ಇತ್ಯರ್ಥ ಮಾಡಿಕೊಳ್ಳಲು ಆಫರ್ ನೀಡಿದ್ದರು ಎಂದು ಹೇಳಿದ್ದು ಈ ಆರೋಪವನ್ನು ಜೇಟ್ಲಿ ನಿರಾಕರಿಸಿದ್ದಾರೆ.
ಅಪರಾಧಿ ಜೊತೆ ಸೇರಿ ತಂತ್ರಹೂಡಿರುವ ಆರೋಪ ಮೇಲೆ ಹಣಕಾಸು ಸಚಿವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮಲ್ಯಗೆ ಸಿಬಿಐ ನೀಡಿದ್ದ ಲುಕ್ ಔಟ್ ನೊಟೀಸ್ ನ ಹಾದಿ ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಹವಣಿಸುತ್ತಿದ್ದಾರೆ, ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸಿಬಿಐಯ ಲುಕ್ ಔಟ್ ನೊಟೀಸನ್ನು ದುರ್ಬಲಗೊಳಿಸಲಾಗಿದ್ದು ಅದು ಪ್ರಧಾನಿಯವರ ಅಥವಾ ಹಣಕಾಸು ಸಚಿವರ ಮಧ್ಯಪ್ರವೇಶವಿಲ್ಲದೆ ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಸಂಸದ ಪಿಎಲ್ ಪುನಿಯಾ, ಮಾರ್ಚ್ 1, 2016ರಲ್ಲಿ ತಾವು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ವಿಜಯ್ ಮಲ್ಯ ಮತ್ತು ಅರುಣ್ ಜೇಟ್ಲಿಯವರು ಸುಮಾರು 15 ನಿಮಿಷಗಳ ಕಾಲ ಮಾತನಾಡುತ್ತಿದ್ದುದು ನೋಡಿದ್ದೆ. ಅದಾಗಿ ಎರಡು ದಿನಗಳಲ್ಲಿ ವಿಜಯ್ ಮಲ್ಯ ದೇಶದಿಂದ ಪಲಾಯನವಾಗಿದ್ದರು. ಈ ಮಾತುಕತೆ ಬಗ್ಗೆ ಜೇಟ್ಲಿಯವರು ಇದುವರೆಗೆ ಎಲ್ಲಿ ಕೂಡ ಹೇಳಿಕೊಂಡಿಲ್ಲ. ಅದನ್ನು ದಾಖಲೆಗಳು ಮತ್ತು ಸಿಸಿಟಿವಿ ಕ್ಯಾಮರಾ ಮೂಲಕ ಪರಿಶೀಲಿಸಬಹುದು ಎಂದು ಆರೋಪಿಸಿದ್ದಾರೆ.
ಆದರೆ ಈ ಎಲ್ಲಾ ಆರೋಪಗಳನ್ನು ಬಿಜೆಪಿ ತಳ್ಳಿ ಹಾಕಿದೆ. ಕಾಂಗ್ರೆಸ್ ವಿರುದ್ಧವೇ ಅದು ಆರೋಪ ಮಾಡಿದೆ. ಹಿಂದಿನ ಯುಪಿಎ ಸರ್ಕಾರವೇ ಮಲ್ಯರ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಜಾಮೀನು ನೀಡುವಂತೆ ಹಣಕಾಸು ಸಂಸ್ಥೆಗಳ ಮೇಲೆ ಒತ್ತಡ ಹಾಕಿತ್ತು. ತನ್ನ ತಪ್ಪುಗಳನ್ನು ಮರೆಮಾಚಲು ಕಾಂಗ್ರೆಸ್ ಹಣಕಾಸು ಸಚಿವ ಜೇಟ್ಲಿ ಮೇಲೆ ಆರೋಪ ಮಾಡುತ್ತಿದೆ. ತಮ್ಮ ಕುಟುಂಬ ಮತ್ತು ಮಲ್ಯ ನಡುವಿನ ಸಂಬಂಧ ಎಂತಹದ್ದು ಎಂದು ರಾಹುಲ್ ಗಾಂಧಿಯವರೇ ಬಹಿರಂಗಪಡಿಸಬೇಕು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಆರೋಪಿಸಿದ್ದಾರೆ.