ಬಿಬಿಎಂಪಿಯಲ್ಲಿ ಬೀದಿ ನಾಯಿಗಳ ಹೆಸರಲ್ಲಿ ಕೋಟಿ ಕೋಟಿ ಲೂಟಿ

ಬೆಂಗಳೂರು, ಸೆ.14-ಬಿಬಿಎಂಪಿಯಲ್ಲಿ ಬೀದಿ ನಾಯಿಗಳ ಹೆಸರಲ್ಲಿ ಕೋಟಿ ಕೋಟಿ ಲೂಟಿ. ಆದರೂ ತಪ್ಪದ ಇವುಗಳ ಹಾವಳಿ. ಇದು ಒಂದು ರೀತಿ ಅಕ್ಬರ್‍ನ ಕಾಲದಲ್ಲಿ ಬೀರಬಲ್ ಹೇಳಿದ ಕಾಗೆಗಳ ಲೆಕ್ಕದ ರೀತಿಯಾಗಿದೆ.
ಆಸ್ಥಾನದಲ್ಲೊಮ್ಮೆ ಅಕ್ಬರ್ ಅವರು ನಮ್ಮ ಸಾಮ್ರಾಜ್ಯದಲ್ಲಿ ಕಾಗೆಗಳಿಷ್ಟಿವೆ ಎಂದು ಪ್ರಶ್ನಿಸಿದಾಗ ಬೀರಬಲ್ ಅದೆಷ್ಟೋ ಲಕ್ಷಗಳಿವೆ ಎಂದು ಹೇಳಿದ್ದರಂತೆ. ಅಷ್ಟು ನಿಖರವಾಗಿ ಹೇಗೆ ಹೇಳುತ್ತೀರ ಎಂದು ಕೇಳಿದ್ದಕ್ಕೆ ಬೇಕಾದರೆ ನೀವೇ ಎಣಿಸಿಕೊಳ್ಳಿ ಎಂದರಂತೆ. ಹೆಚ್ಚಾಗಿದ್ದರೆ ಎಲ್ಲಿಂದಲೋ ಹಾರಿ ಬಂದಿದ್ದವು, ಕಡಿಮೆ ಇದ್ದರೆ ಎಲ್ಲೋ ಹಾರಿ ಹೋಗಿವೆ ಎಂದು ಬೀರಬಲ್ ಹೇಳಿದರಂತೆ. ಹೀಗಿದೆ ನಮ್ಮ ಬಿಬಿಎಂಪಿ ಬೀದಿ ನಾಯಿಗಳ ಬಗ್ಗೆ ಕೊಟ್ಟಿರುವ ಲೆಕ್ಕ ಮತ್ತು ಇದರ ಹೆಸರಿನಲ್ಲಿ ಕೋಟಿ ಕೋಟಿಗಳ ಮೊತ್ತದ ಲೂಟಿ.

ಕಳೆದ ಐದು ವರ್ಷದಲ್ಲಿ ಬೀದಿ ನಾಯಿಗಳಿಗೆ ಪಾಲಿಕೆ ಖರ್ಚು ಮಾಡಿದ ಕೋಟಿಗಟ್ಟಲೆ ಹಣ ನೀವು ಕೇಳಿದರೆ ಹೌಹಾರುತ್ತೀರಿ. ಇಷ್ಟು ಹಣ ಖರ್ಚು ಮಾಡಿದರೂ ಬೀದಿನಾಯಿಗಳ ಹಾವಳಿ ನಗರದಲ್ಲಿ ತಪ್ಪಿಲ್ಲ. ಆದರೆ ಪಾಲಿಕೆ ಮಾತ್ರ ಬೀದಿ ನಾಯಿಗಳ ಬಗ್ಗೆ ಲೆಕ್ಕ ಕೊಡುವುದು ನಿಂತಿಲ್ಲ. ಯಾರೇ ಆರ್‍ಟಿಐ ಮೂಲಕ ಸಲ್ಲಿಸಿ ಲೆಕ್ಕ ಕೇಳಿದರೆ ನಿಖರವಾದ ಲೆಕ್ಕ ಮಾತ್ರ ಸಿಗುತ್ತದೆ. ಆದರೆ ಹಾವಳಿ ನಿಂತಿಲ್ಲ.

ನಾಯಿಗಳು ರಾಜಾರೋಷವಾಗಿ ಓಡಾಡುತ್ತಲೇ ಅಟ್ಟಹಾಸ ಮೆರೆಯುತ್ತವೆ. 2018ರಲ್ಲಿ ಬೀದಿ ನಾಯಿ ದಾಳಿಗೆ 35 ಜನ ಗಾಯಗೊಂಡು ಓರ್ವ ಬಾಲಕ ಕ್ರೂರವಾಗಿ ಸಾವನ್ನಪ್ಪಿದ್ದಾನೆ. ಬೀದಿ ನಾಯಿ ಹಾವಳಿ ಮುಂದುವರೆದಿದೆ. ಬಿಬಿಎಂಪಿಯ ಪಶುಪಾಲನಾ ವಿಭಾಗ ಇದ್ದು ಇಲ್ಲದಂತಾಗಿದೆ. ಸಂತಾನ ಹರಣ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಖರ್ಚಾಗಿದೆ. ಸಂತಾನ ಹರಣ ಮಾಡಿದರೂ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಲೇ ಇದೆ. ಬೀದಿ ನಾಯಿಗಳ ಸಂತತಿ ಬೆಳೆಯುತ್ತಲೇ ಇವೆ. 2009ರಿಂದ ಈಚೆಗೆ 1500 ಕ್ಕೂ ಹೆಚ್ಚು ಮಂದಿಗೆ ಬೀದಿ ನಾಯಿಗಳು ಕಚ್ಚಿವೆ. ಪಾಲಿಕೆ ಪ್ರಕಾರ 1,19,860 ಬೀದಿ ನಾಯಿಗಳಿವೆ. ಕಳೆದ ಐದು ವರ್ಷದಲ್ಲಿ ಬೀದಿ ನಾಯಿ ಸೆರೆ ಹಿಡಿಯಲು ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗಿದೆ.
2012-13 ರಲ್ಲಿ 72,55,000
2013-14 ರಲ್ಲಿ 56,03,000
2014-15ರಲ್ಲಿ 30,33,000
2015-16ರಲ್ಲಿ 61,79,000
2016-17ರಲ್ಲಿ 06,77,000
ಬೀದಿನಾಯಿಗಳನ್ನು ಹಿಡಿಯುತ್ತಾರೋ, ಸಂತಾನಹರಣ ಚಿಕಿತ್ಸೆ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಲೆಕ್ಕ ಮಾತ್ರ ಪಕ್ಕಾ ಆಗಿರುತ್ತದೆ. ಎನ್‍ಜಿಒಗಳಿಗೆ ಹಣ ಸಂದಾಯವಾಗಿರುತ್ತದೆ. ಆರ್‍ಟಿಐನಲ್ಲಿ ತೆಗೆದುಕೊಂಡ ಮಾಹಿತಿ ಪ್ರಕಾರ ಈ ಅಂಕಿಅಂಶಗಳು ಲಭ್ಯವಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ