ಶಿಲ್ಲಾಂಗ್: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮೇಘಾಲಯದಲ್ಲಿ ಐದು ಬಾರಿ ಸಿಎಂ ಆಗಿದ್ದ ಡಿಡಿ ಲಪಾಂಗ್ ಪಕ್ಷಕ್ಕೆ ವಿದಾಯ ಘೋಷಣೆ ಮಾಡಿದ್ದಾರೆ.
ಪಕ್ಷದಲ್ಲಿನ ಆಂತರಿಕ ಭಿನ್ನಮತದಿಂದ ಮತ್ತು ತಮ್ಮನ್ನು ಮೂಲೆಗುಂಪು ಮಾಡಿರುವ ಕುರಿತು ಉಲ್ಲೇಖಿಸಿರುವ ಡಿಡಿ ಲಪಾಂಗ್ ಪಕ್ಷವನ್ನು ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸುಧೀರ್ಘ ಪತ್ರವನ್ನು ಬರೆದಿರುವ ಲಪಾಂಗ್ ಅವರು, ರಾಜ್ಯ ಕಾಂಗ್ರೆಸ್ ಘಟಕದಲ್ಲಿನ ಇತ್ತೀಚೆನ ಬೆಳವಣಿಗೆಗಳು ತಮಗೆ ತೀವ್ರ ನೋವನ್ನುಂಟು ಮಾಡಿದೆ. ಪಕ್ಷದ ಹಿರಿಯ ನಾಯಕರಿಗೆ ಸಿಗಬೇಕಾದ ಗೌರವ ಮತ್ತು ಮನ್ನಣೆ ದೊರೆಯುತ್ತಿಲ್ಲ. ಪಕ್ಷಕ್ಕೆ ಅವರು ಸಲ್ಲಿಸಿರುವ ಸೇವೆ, ಅವರ ಹಿರಿತನ ಮತ್ತು ಅನುಭವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಹೈಕಮಾಂಡ್ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ತುಂಬಾ ನೋವಿನಿಂದ ನಾನು ಪಕ್ಷ ತೊರೆಯುತ್ತಿದ್ದೇನೆ ಎಂದು ಲಪಾಂಗ್ ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಪಕ್ಷದ ಆಂತರಿಕ ವ್ಯವಸ್ಥೆಯಲ್ಲಿ ತಮ್ಮನ್ನೂ ಸೇರಿದಂತೆ ಹಿರಿಯ ಮುಖಂಡರನ್ನು ಮೂಲೆಗುಂಪು ಮಾಡಲಾಗುತ್ತಿದೆ. ತಮಗೆ ವಿಧಿಸಿರುವ ನಿರ್ಬಂಧಗಳು ನನ್ನ ಗೌರವಕ್ಕೆ ಚ್ಯುತಿ ತಂದಿದ್ದು, ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಆದರೆ ಜನರಿಗಾಗಿ ದುಡಿಯಬೇಕು ಎಂಬ ಹಂಬಲ ನನ್ನಲ್ಲಿನ್ನೂ ಇದ್ದೂ, ಯಾವುದೇ ನಿರ್ಬಂಧಗಳೂ ನನ್ನ ತಡೆಯಲು ಸಾಧ್ಯವಿಲ್ಲ. ಹೀಗಾಗಿ ಪಕ್ಷ ತೊರೆಯುತ್ತಿದ್ದೇನೆ. ಪಕ್ಷದಲ್ಲಿ ಇಷ್ಟು ವರ್ಷ ಸಮರ್ಥವಾಗಿ ಕೆಲಸ ಮಾಡಿದ್ದೇನೆ ಎಂಬ ಸಮಾಧಾನವಿದ್ದು, ಎಂದು 84 ವರ್ಷದ ಲಪಾಂಗ್ ರಾಹುಲ್ ಗಾಂಧಿ ಅವರಿಗೆ ಪತ್ರದಲ್ಲಿ ಹೇಳಿದ್ದಾರೆ.
ಮೇಘಾಲಯದ ನಾಂಗ್ ಪೋ ವಿಧಾನಸಭಾ ಕ್ಷೇತ್ರದಿಂದ ಡಿಡಿ ಲಪಾಂಗ್ ಅವರು 1972ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದರು. ಅಂತೆಯೇ ವಿಧಾನಸಭೆ ಪ್ರವೇಶ ಮಾಡಿದ ಮೊದಲ ಮೇಘಾಲಯದ ಪಕ್ಷೇತರ ಶಾಸಕ ಎಂಬ ಕೀರ್ತಿಗೂ ಭಾಜನರಾಗಿದ್ದರು. ಕಳೆದ ಡಿಸೆಂಬರ್ ನಲ್ಲಿ ಲಪಾಂಗ್ ಅವರನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು.